Struggle against Kasturirangan report notification
ಕನ್ನಡಪ್ರಭ ವಾರ್ತೆ ಸಾಗರ
ಕಸ್ತೂರಿ ರಂಗನ್ ೭ನೇ ಕರಡು ಅಧಿಸೂಚನೆ ವಿರುದ್ಧ ಬೃಹತ್ ಹೋರಾಟ ರೂಪಿಸಲು ಹಾಗೂ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಒತ್ತಾಯಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಡೆದ ಶಿವಮೊಗ್ಗ ಜಿಲ್ಲಾ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ಸಮಾಲೋಚನಾ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನ ಬೇಡವೆಂದು ಹಿಂದಿನ ಎಲ್ಲ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತಾ ಬಂದಿದ್ದು, ಮತ್ತೆ ಮತ್ತೆ ಅದನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಾರಿ ಆಕ್ಷೇಪಣೆ ಸಲ್ಲಿಸಲು ಸೆ. ೨೫ ಕೊನೆ ದಿನವಾಗಿದ್ದು, ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗುತ್ತಿದೆ. ಈಗಾಗಲೆ ಸಾಗರ ತಾಲೂಕು ಮೂರು ಬಾರಿ, ಹೊಸನಗರ ತಾಲೂಕು ಆರು ಬಾರಿ ಮುಳುಗಡೆಯಿಂದ ಹೈರಾಣಾಗಿ ಹೋಗಿದ್ದು, ಕಳೆದ ೬೫ ವರ್ಷಗಳಿಂದ ಮುಳುಗಡೆ ಸಂತ್ರಸ್ತರಿಗೆ ನಾಗರಿಕ ಸೌಲಭ್ಯ ಕೊಟ್ಟಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಾವು ಮತ್ತೆ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಅಭಯಾರಣ್ಯ ಕಾಯ್ದೆಯಿಂದಲೇ ಮಲೆನಾಡು ಹಳ್ಳಿಗಾಡಿನ ಜನರು ಬದುಕಲು ಆಗುತ್ತಿಲ್ಲ. ಇನ್ನು ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ನೇರವಾಗಿ ನಮ್ಮನ್ನು ಒಕ್ಕಲೆಬ್ಬಿಸದೆ ಇದ್ದರೂ ಪ್ರತಿದಿನ ಕಠಿಣ ಕಾನೂನು ಹೇರಿ ನಾವೇ ಅಲ್ಲಿಂದ ಓಡಿ ಹೋಗುವಂತೆ ಮಾಡುವ ತಂತ್ರಗಾರಿಕೆ ಅಡಗಿದೆ ಎಂದು ಹೇಳಿದರು.
ಈಗಾಗಲೆ ಹೊಸನಗರ ತಾಲೂಕಿನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಿದೆ. ಹೊಸನಗರ ನಂತರ ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರದಲ್ಲೂ ಪಾದಯಾತ್ರೆ ನಡೆಸಲಾಗುತ್ತಿದ್ದು, ಅಕ್ಟೋಬರ್ ಅಂತ್ಯದಲ್ಲಿ ಶಿವಮೊಗ್ಗದಲ್ಲಿ ೧ಲಕ್ಷಕ್ಕೂ ಅಧಿಕ ರೈತರು, ಸಹಕಾರಿಗಳನ್ನು ಒಳಗೊಂಡ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಗೆ ಮುಖ್ಯಮಂತ್ರಿಗಳನ್ನು ಸಚಿವರನ್ನು, ಕೇಂದ್ರ ಸಚಿವರು, ಸಂಸದರು, ಶಾಸಕರನ್ನು ಆಹ್ವಾನಿಸಿ ಅವರಿಗೆ ಮನವಿ ನೀಡುವ ಉದ್ದೇಶ ಹೊಂದಲಾಗಿದೆ. ಕಸ್ತೂರಿ ರಂಗನ್ ವರದಿ ಕುರಿತು ಸದನದಲ್ಲಿ ಗಂಭೀರ ಚರ್ಚೆ ನಡೆಯಬೇಕು.ಶೀಘ್ರದಲ್ಲಿಯೆ ಮುಖ್ಯಮಂತ್ರಿಗಳನ್ನು ನಿಯೋಗದ ಮೂಲಕ ಭೇಟಿ ಮಾಡಿ, ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಗ್ರಾಮ ಮತ್ತು ಅದರ ಹತ್ತು ಕಿ.ಮೀ. ಸುತ್ತಳತೆಯ ಪ್ರದೇಶ ಬಯಲು ಜೈಲಾಗಿ ಮಾರ್ಪಾಡು ಆಗುತ್ತದೆ. ಶಿವಮೊಗ್ಗ ಜಿಲ್ಲೆಯ ೪೭೩ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಸೇರಿದೆ. ಇದರ ವಿರುದ್ಧ ಪಕ್ಷಾತೀತ ಹೋರಾಟ ಅನಿವಾರ್ಯ. ಆರ್.ಎಂ. ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ಅಸ್ತಿತ್ವಕ್ಕೆ ತಂದಿದ್ದು ಇದರ ಮೂಲಕವೇ ಸಮಗ್ರ ಹೋರಾಟ ನಡೆಯಲಿದೆ. ಈಗಾಗಲೆ ಕೇರಳದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ನಡೆದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ರಾಜ್ಯದಲ್ಲಿ ಸಹ ಅಂತಹದ್ದೇ ಹೋರಾಟ ರೂಪಿಸಬೇಕು. ವರದಿಯ ಗಂಭೀರತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಆಕ್ಷೇಪಣೆ ಸಲ್ಲಿಸುವ ಜೊತೆಗೆ ವೇದಿಕೆ ನಡೆಸುವ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಚೇತನರಾಜ್ ಕಣ್ಣೂರು, ಬಿ.ಎ.ಇಂದೂಧರ ಬೇಸೂರು, ದಿನೇಶ್ ಬರದವಳ್ಳಿ, ವ.ಶಂ.ರಾಮಚಂದ್ರ ಭಟ್, ಅಮೃತೇಶ್ವರ, ರವಿಕುಮಾರ್ ಎಚ್.ಎಂ., ಸೋಮಶೇಖರ್ ಲ್ಯಾವಿಗೆರೆ ಇನ್ನಿತರರು ಇದ್ದರು.
ಫೋಟೊ೧೮ಕೆ.ಎಸ್.ಎ.ಜಿ.೧
ಶಿವಮೊಗ್ಗ ಜಿಲ್ಲಾ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ಸಮಾಲೋಚನಾ ಸಭೆಯಲ್ಲಿ ಆರ್.ಎಂ.ಮಂಜುನಾಥಗೌಡ ಮಾತನಾಡಿದರು.