ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದು, ಇನ್ನೊಂದು ವಾರದೊಳಗೆ ನಾಲೆಗಿಳಿದು ಹೋರಾಟ ನಡೆಸುವುದಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ಕೃಷ್ಣರಾಜಸಾಗರದಲ್ಲಿ ಸಾಕಷ್ಟು ನೀರಿದ್ದ ಸಮಯದಲ್ಲಿ ನಾಲೆಗಳಿಗೆ ನೀರು ಹರಿಸದೆ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾಲೆ ಅಭಿವೃದ್ಧಿ ಕಾಮಗಾರಿಯೂ ಗುಣಾತ್ಮಕವಾಗಿ ನಡೆದಿಲ್ಲ. ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ. ಬೆಳೆದು ನಿಂತ ಬೆಳೆಗಳಿಗೆ ನೀರು ಹರಿಸದೆ ರೈತರು ಮತ್ತು ಜಾನುವಾರುಗಳ ಬಾಯಿಗೆ ಸರ್ಕಾರ ಮಣ್ಣು ಹಾಕಿದೆ ಎಂದು ನಗರದ ಬಂದೀಗೌಡ ಬಡಾವಣೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ರೈತ ವಿರೋಧಿ ನಡೆ:ಕೆಆರ್‌ಎಸ್‌ನಲ್ಲಿ ೮೯ ಅಡಿ ನೀರಿದ್ದ ಸಮಯದಲ್ಲೇ ಒಂದು ಕಟ್ಟು ನೀರು ಕೊಡಬಹುದಿತ್ತು. ಆ ನೀರು ಕೊಟ್ಟಿದ್ದರೆ ಜನ-ಜಾನುವಾರುಗಳು ದಾಹ ಇಂಗಿಸುವ ಜೊತೆಗೆ ಬೆಳೆಗಳಿಗೂ ಸ್ವಲ್ಪ ಪ್ರಮಾಣದ ಅನುಕೂಲವಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ಇದೊಂದು ರೈತ-ಜನವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದರು.
ಬರಪರಿಹಾರ ಹಣ ರೈತರ ಖಾತೆಗೆ ಬಂದೇ ಇಲ್ಲ. ಜಿಲ್ಲಾ ಸಚಿವರು ಮತ್ತು ಅಧಿಕಾರಿಗಳು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯಸರ್ಕಾರದ ಬಳಿ ಬರಪರಿಹಾರ ಕೊಡುವುದಕ್ಕೆ ಹಣವೇ ಇಲ್ಲ. ಅದಕ್ಕಾಗಿಯೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.೨ ಲಕ್ಷ ಮತಗಳಿಂದ ಗೆಲುವು:
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ೨ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತವಾಗಿದೆ. ಬಿಜೆಪಿ ಮುಖಂಡರು-ಕಾರ್ಯಕರ್ತರಿಂದ ಸಂಪೂರ್ಣವಾದ ಬೆಂಬಲ ದೊರಕಿದೆ. ಮಹಿಳೆಯರೂ ಸೇರಿದಂತೆ ಪಕ್ಷಾತೀತವಾಗಿ ಜಿಲ್ಲೆಯ ಜನರು ಕುಮಾರಸ್ವಾಮಿ ಅವರ ಕೈಹಿಡಿದಿದ್ದಾರೆ ಎಂದು ವಿಶ್ವಾಸದಿಂದ ಹೇಳಿದರು.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮಾಡಿದ್ದ ಸಾಲಮನ್ನಾ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಜನರು ಅವರ ಕೈ ಹಿಡಿದಿದ್ದಾರೆ. ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸುವುದು ನಿಶ್ಚಿತ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))