ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿರುವ ಹೋರಾಟವಾಗಿದೆ, ಮತದಾರರು ನ್ಯಾಯದ ಪರ ಬೆಂಬಲಿಸಬೇಕು ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಗುರುಮಠಕಲ್ ಮತಕ್ಷೇತ್ರದ ಕಾಳೆಬೆಳಗುಂದಿಯಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 10 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಜನಪರ ಯೋಜನೆಗಳನ್ನು ನೀಡಿದೆ, ಪರಿಣಾಮ ಎಲ್ಲಾ ಭಾಗದಲ್ಲಿ ಕಾಂಗ್ರೆಸ್ ಪರ ಅಲೆ ಕಾಣುತ್ತಿದೆ, ಮತದಾರರು ವಾಸ್ತವಿಕತೆ ಅರಿತು ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ನಾನು ಕ್ಷೇತ್ರದ ಅಭಿವೃದ್ಧಿಗೆ ಹತ್ತಾರು ಕನಸುಗಳನ್ನು ಕಟ್ಟಿಕೊಂಡಿದ್ದೇನೆ, ಅವುಗಳ ಅನುಷ್ಠಾನ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳಿದರು. ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ಬಿಜೆಪಿ ಅಭ್ಯರ್ಥಿ ಡಾ. ಜಾಧವ್ ಸುಳ್ಳುಗಾರ, ಕಳೆದ ಚುನಾವಣೆಯಲ್ಲಿ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಿದರೆ ಕಲ್ಯಾಣ ಕರ್ನಾಟಕ ಭಾಗ ದೇಶದ ಸೆಳೆಯಲಿದೆ ಎಂದು ತಿಳಿಸಿದರು.ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಕೆಪಿಸಿಸಿ ಕಾರ್ಯದರ್ಶಿ ಮರಿಗೌಡ ಹುಲಕಲ್, ಶರಣಪ್ಪ ಮಾನೆಗಾರ, ಚಿದಾನಂದಪ್ಪ ಕಾಳೆಬೆಳಗುಂದಿ, ಮಾಜಿ ಶಾಸಕ ಶರಣಪ್ಪ ಮಟ್ಟೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ ಅನಪೂರ, ಮುಖಂಡರಾದ ಸಾಯಿಬಣ್ಣ ಬೋರಬಂಡಾ, ಸಿದ್ಲಿಂಗರಡ್ಡಿ ಉಳ್ಳೆಸೂಗುರ, ಸಿದ್ದಪ್ಪಗೌಡ ಪಾಟೀಲ್ ಕಾಳೆಬೆಳಗುಂದಿ, ಚಂದ್ರಶೇಖರ ವಾರದ, ಡಾ. ಭೀಮಣ್ಣ ಮೇಟಿ, ಲಕ್ಷ್ಮೀಕಾಂತರಡ್ಡಿ ಪಲ್ಲಾ, ಕೃಷ್ಣಾ ಚಪಟ್ಲಾ, ವಿನೋದ ಪಾಟೀಲ್, ನಿರಂಜನರಡ್ಡಿ ಶೆಟ್ಟಿಹಳ್ಳಿ, ಸ್ಯಾಮಸನ್ ಮಾಳಿಕೇರಿ, ಹೊನ್ನೇಶ ಬಳಿಚಕ್ರ, ಮಲ್ಲಣ್ಣ ದಾಸನಕೇರಿ, ವಿಶ್ವನಾಥ ನೀಲಹಳ್ಳಿ, ಸಾಯಿಬಣ್ಣ ಸೈದಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.