ಸರಕಾರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಕೊಟ್ಯಂತರ ಅನುದಾನ ನೀಡುತ್ತಿದ್ದರೂ ಯೋಜನೆಗಳ ಅನುಷ್ಠಾನದ ವೈಫಲ್ಯದಿಂದಾಗಿ ಪಟ್ಟಣದ ಜನ ಕುಡಿಯುವ ನೀರಿಗಾಗಿ ಅಲೆಯುವುದು ಮಾತ್ರ ತಪ್ಪಿಲ್ಲ.
ಎನ್. ಪಂಪನಗೌಡ ಬಾದನಹಟ್ಟಿ
ಕುರುಗೋಡು: ಮುಂಗಾರು ಮಳೆ ಆರಂಭಗೊಂಡಿದರೂ ಇನ್ನೂ ಬಾರದ ಮಳೆಯಿಂದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸರಕಾರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಕೊಟ್ಯಂತರ ಅನುದಾನ ನೀಡುತ್ತಿದ್ದರೂ ಯೋಜನೆಗಳ ಅನುಷ್ಠಾನದ ವೈಫಲ್ಯದಿಂದಾಗಿ ಪಟ್ಟಣದ ಜನ ಕುಡಿಯುವ ನೀರಿಗಾಗಿ ಅಲೆಯುವುದು ಮಾತ್ರ ತಪ್ಪಿಲ್ಲ.ಸಮೀಪದ ಕುಡತಿನಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಹನಿ ನೀರಿಗಾಗಿ ತಿರುಗಾಡುವಂತಾಗಿದೆ. ಮಳೆಗಾಲ ಬಂದರೂ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ತಪ್ಪಿಲ್ಲ. ಮಹಿಳೆಯರು, ಮಕ್ಕಳು ಕೊಡ ನೀರಿಗಾಗಿ ಅಲೆದಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದಂತಾಗಿದೆ.
ಇಲ್ಲಿ ಸುಮಾರು 19 ವಾರ್ಡ್‌ಗಳಿದ್ದು, 35 ಸಾವಿರ ಜನಸಂಖ್ಯೆ ಇದೆ. 45 ಸಾವಿರ ನಲ್ಲಿಗಳಿದ್ದು, ಇದರಲ್ಲಿ ಕೆಲವೊಂದು ಮಾತ್ರ ಚಾಲ್ತಿಯಲ್ಲಿವೆ. ಇನ್ನು 9 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 3 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 85 ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಇದರಲ್ಲಿ ಕೆಲವೊಂದು ಮಾತ್ರ ಚಾಲ್ತಿಯಲ್ಲಿದ್ದು, ಇನ್ನುಳಿದವು ಅಂತರ್ಜಲ ಕುಸಿತದಿಂದ ನಿರುಪಯುಕ್ತಗೊಂಡಿವೆ.ಇಲ್ಲಿನ ಜನತೆ ಜಿಂದಾಲ್ ಮತ್ತು ಕೃಷಿ ಹಾಗೂ ಕೂಲಿ ಕಾಯಕವನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಕುಡತಿನಿ ಪಟ್ಟಣಕ್ಕೆ ಒಂದೇ ಕುಡಿಯುವ ನೀರಿನ ಕೆರೆ ನಿರ್ಮಾಣಗೊಂಡಿದ್ದು, ತಿಮ್ಮಲಾಪುರ ಕಾಲುವೆಗೆ ನೀರು ಹರಿದರೆ ಮಾತ್ರ ಕೆರೆಗೆ ನೀರು ಹರಿಯುತ್ತದೆ. ಇಲ್ಲವಾದರೆ ತಿಮ್ಮಲಾಪುರ ಗ್ರಾಮದಿಂದ ನೇರವಾಗಿ ಬೋರ್‌ವೆಲ್ ಗಳಿಂದ ಕುಡುತಿನಿ ಪಟ್ಟಣಕ್ಕೆ ನೀರು ಒದಗಿಸಲಾಗುತ್ತದೆ. ಸರಿಯಾದ ಸಮಯಕ್ಕೆ ಪಟ್ಟಣದ ವಾರ್ಡ್‌ಗಳಿಗೆ ನೀರು ಸರಬರಾಜಾಗದ ಪರಿಣಾಮ ಶಾಲಾ ಮಕ್ಕಳು ಹಾಗೂ ಹಿರಿಯರು ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದ ಸುತ್ತಮುತ್ತ ವಿವಿಧ ಕೈಗಾರಿಕಾ ಕಂಪನಿಗಳಿದ್ದು, ನಾಗರಿಕರ ಅರೋಗ್ಯದ ಮೇಲೆ ಪರಿಣಾಮ ಬಿರುವುದರ ಜೊತೆಗೆ ಅಂತರ್ಜಲ ಕುಸಿತದಿಂದ ಪಟ್ಟಣ ಸೇರಿ ಸುತ್ತಮುತ್ತ ಗ್ರಾಮದಲ್ಲಿ ಕೂಡ ನಲ್ಲಿಗಳು ಹಾಗೂ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ. ಇದರಿಂದ ಜನರು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪಟ್ಟಣಕ್ಕೆ ಸರಿಯಾದ ಸಮಯಕ್ಕೆ ನೀರು ಒದಗಿಸುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲದಂತಾಗಿದೆ. ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿ ಇದ್ದು, ವರ್ಷಕ್ಕೆ ನೂರಾರು ಕೋಟಿ ಅನುದಾನ ಸರ್ಕಾರದಿಂದ ಬರುತ್ತಿದ್ದರೂ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವಲ್ಲಿ ವಿಫಲಗೊಂಡಿರುವುದು ವಿಪರ್ಯಾಸವಾಗಿದೆ.ನಮ್ ಸಮಸ್ಯೆ ಕೇಳೋರಿಲ್ಲ. ಕೊಡ ನೀರಿಗಾಗಿ ತಿರುಗಾಡಬೇಕು. ಬೇಸಿಗೆ ಅಲ್ಲದೇ ಮಳೆಗಾಲದಲ್ಲೂ ಇಂತಹ ಪರಿಸ್ಥಿತಿ ಬಂದಿದೆ. ನಿತ್ಯ ನೀರು ತರುವುದೇ ಮುಖ್ಯ ಕೆಲಸವಾಗಿದೆ. ಇನ್ನು ಕೂಲಿ ಮಾಡುವುದು ಹೇಗೆ? ಕೂಲಿ ಮಾಡದಿದ್ದರೆ ಜೀವನ ಹೇಗೆ? ಇದರಿಂದ ಶಾಲಾ ಮಕ್ಕಳು ಹಾಗೂ ಹಿರಿಯರು ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗಾಗಿ ಕಾಯಬೇಕಾಗಿದೆ ಎಂದು ವಕೀಲರಾದ ಟಿ.ಕೆ. ಕಾಮೇಶ್ ಹೇಳುತ್ತಾರೆ.
ಜನವರಿಯಲ್ಲೇ ನೀರು ಬಂದಾಗಿದೆ. ಬೇರೆ ಬೇರೆ ಬೋರ್‌ವೆಲ್‌ಗಳಿಂದ ಪಟ್ಟಣದ ಜನತೆಗೆ ನೀರು ಒದಗಿಸಲಾಗುತ್ತಿದೆ. ಕೆ.ಇ.ಡಿ. ಬೋರ್ಡ್‌ನಿಂದ ತಿಮ್ಮಲಾಪುರ ಮತ್ತು ಕುಡುತಿನಿ ಪಟ್ಟಣ ಸೇರಿ 25 ಬೋರ್ ವೆಲ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಕುಡುತಿನಿ ಪಪಂ ಮುಖ್ಯಧಿಕಾರಿ ಎನ್. ಶಿವಲಿಂಗಪ್ಪ ತಿಳಿಸಿದ್ದಾರೆ.