ದೇಹದಲ್ಲಿ ಶಕ್ತಿ ಇರುವರೆಗೂ ನಂಬಿದ ಜನತೆಗಾಗಿ ಹೋರಾಟ: ಎಚ್.ಡಿ.ದೇವೇಗೌಡ

| Published : Mar 28 2024, 12:53 AM IST

ದೇಹದಲ್ಲಿ ಶಕ್ತಿ ಇರುವರೆಗೂ ನಂಬಿದ ಜನತೆಗಾಗಿ ಹೋರಾಟ: ಎಚ್.ಡಿ.ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

೬೦ ವರ್ಷಗಳ ಕಾಲ ರಾಜಕೀಯ ಹೋರಾಟ ಮಾಡಿ, ಈಗ ಬಿಜೆಪಿ ಜೊತೆ ಏಕೆ ಹೋಗಿದ್ದೀರಿ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ವಿರೋಧಿಗಳು ನನ್ನನ್ನು ಹಂಗಿಸುತ್ತಾರೆ. ಕೇಳಲು ಅವರಿಗೆ ಅಧಿಕಾರವಿದೆ, ಕೇಳಲಿ ಬಿಡಿ. ನನಗೆ ಅದರ ಬಗ್ಗೆ ಬೇಸರವಿಲ್ಲ.

ಕನ್ನಡಪ್ರಭ ವಾರ್ತೆ ಹಿರೀಸಾವೆ

ನನಗೆ ನಿಲ್ಲಲು ಆಗಲ್ಲ, ಆದರೆ ಬುದ್ಧಿಶಕ್ತಿಯಿದೆ. ವಾಕ್ ಚಾತುರ್ಯವಿದೆ. ಈ ದೇಹದಲ್ಲಿ ಶಕ್ತಿ ಇರುವವರೆಗೂ ನನ್ನ ನಂಬಿರುವ ಜನತೆಗಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಪಟ್ಟಣದ ಶ್ರೀ ಚೌಡೇಶ್ವರಿ ಮುಖ್ಯದ್ವಾರದ ಬಳಿ ಲೋಕಸಭೆ ಚುನಾವಣೆ ಹಿನ್ನೆಲೆ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಹೋಬಳಿ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಈ ಜೀವ ಹಾಗೂ ಜೀವನ ನಾಡಿನ ಜನತೆಗೆ ಮೀಸಲು ಎಂದರು.

೬೦ ವರ್ಷಗಳ ಕಾಲ ರಾಜಕೀಯ ಹೋರಾಟ ಮಾಡಿ, ಈಗ ಬಿಜೆಪಿ ಜೊತೆ ಏಕೆ ಹೋಗಿದ್ದೀರಿ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ವಿರೋಧಿಗಳು ನನ್ನನ್ನು ಹಂಗಿಸುತ್ತಾರೆ. ಕೇಳಲು ಅವರಿಗೆ ಅಧಿಕಾರವಿದೆ, ಕೇಳಲಿ ಬಿಡಿ. ನನಗೆ ಅದರ ಬಗ್ಗೆ ಬೇಸರವಿಲ್ಲ ಎಂದು ತಿಳಿಸಿದರು.

೧೯೯೬ ರಲ್ಲಿ ನನ್ನನ್ನು ಅಧಿಕಾರದಿಂದ ತೆಗೆದರಷ್ಟೇ, ಬೇರೆ ಏನೂ ಮಾಡಲು ಅವರಿಂದ ಆಗಲಿಲ್ಲ. ನನ್ನ ಅವಧಿಯಲ್ಲಿ ಏನೆಲ್ಲ ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸಿದ್ದೇನೆ ಎಂಬುದು ನನಗೆ ಗೊತ್ತು. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ತಪ್ಪು ಹಾಗೂ ಭ್ರಷ್ಟಾಚಾರ ನಡೆದಿಲ್ಲ ಎಂಬುದು ನನ್ನ ಶತ್ರುಗಳಿಗೂ ಅರಿವಿದೆ. ಆದರೆ ಮಿತ್ರರಿಗೆ ಹೇಳುವ ಯೋಗ್ಯತೆ ಇಲ್ಲ. ಸತ್ಯ ಹೇಳಲು ಆತ್ಮದಲ್ಲಿ ಯಾವುದೇ ಕಳಂಕ ಇರಬಾರದು. ಆಗ ಮಾತ್ರ ಧೈರ್ಯವಾಗಿ ಸತ್ಯ ಹೇಳಬಹುದು ಎಂದು ನಕ್ಕರು.

ಅವತ್ತಿನ ಕಾಲದಲ್ಲಿಯೇ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರು. ಆದರೆ ಅವರಿಂದ ಆಗಲಿಲ್ಲ. ಯಾಕೆಂದರೆ ನಾನು ಮಾಡುವ ಕೆಲಸದಲ್ಲಿ ಯಾವುದೇ ಲೋಪವಿರಲಿಲ್ಲ. ಜನಪರವಾದ ಕೆಲಸ ಮಾಡಿದ್ದೇನೆ. ಸತ್ಯವಾಗಿಯೇ ನಡೆದುಕೊಂಡು ಬಂದಿದ್ದೇನೆ ಎಂದು ವಿರೋಧ ಪಕ್ಷದ ನಾಯಕರಿಗೆ ಚಾಟಿ ಬೀಸಿದರು.

ದೇಶದಲ್ಲಿ ಸಮಸ್ಯೆಗಳೆದುರಾದ ವೇಳೆ ಹೋರಾಡಿದ್ದೇನೆ. ನಾನು ಪ್ರಧಾನಿಯಾದ ವೇಳೆ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ದೇಶದ ಏಳು ರಾಜ್ಯಗಳಿಗೆ ಜವಾಹಾರ್ ಲಾಲ್ ನೆಹರು ಹೋಗಿರಲಿಲ್ಲ. ನಾನು ಹೋಗಿ ೬೩೦೦ ಕೋಟಿ ರು. ಅನುದಾನ ನೀಡಿ ೭ ರಾಜ್ಯಗಳ ಅಭ್ಯೂದಯಕ್ಕೆ ಕಾರಣನಾಗಿದ್ದೇನೆ ಎಂಬ ಹೆಗ್ಗಳಿಕೆ ನನಗಿದೆ ಎಂದರು.

ಇವತ್ತು ಹಾಸನ ಜಿಲ್ಲೆಯ ಜನಕ್ಕೆ ಕುಡಿಯುವ ನೀರಿಲ್ಲ.ನಾವು ಯಾವ ಸ್ಥಿತಿಯಲ್ಲಿದ್ದೇವೆ ನೀವೇ ನೋಡಿ. ತಮಿಳುನಾಡಿನ ಸಿಎಂ ಸ್ಟ್ಯಾಲಿನ್ ಅವರು ಕಾವೇರಿ ನೀರು ನಮಗೆ ಮಾತ್ರ ಬೇಕು, ಕರ್ನಾಟಕಕ್ಕೆ ಕೊಡಬಾರದು ಎಂದು ವರ್ತಿಸುವುದು ಸರಿಯಲ್ಲ. ನಾನು ದೆಹಲಿಗೆ ಹೋಗಿ ವಕೀಲರನ್ನು ಭೇಟಿ ಮಾಡಿ ಬಂದಿದ್ದೇನೆ. ಹೋರಾಟದ ಛಲವಿದೆ, ಆದರೆ ನಮಗೆ ಅಧಿಕಾರವಿಲ್ಲ. ನನಗೆ ಈಗ ೯೧ ವರ್ಷ ವಯಸ್ಸು, ದೇವರು ಇನ್ನೂ ಎಷ್ಟು ದಿನ ಆಯಸ್ಸು ಕೊಡುತ್ತಾನೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿಮ್ಮ ಗ್ಯಾರಂಟಿಗಳನ್ನು ನಾನು ವಿರೋಧ ಮಾಡಲ್ಲ, ಆದರೆ ಜನಸಾಮಾನ್ಯರ ದೈನಂದಿನ ಬದುಕಿಗೆ ನೆರವಾಗುವ ಯೋಜನೆಗಳನ್ನು ಜಾರಿಗೊಳಿಸಿ. ಇಲ್ಲವಾದರೆ ನಾಡಿನ ಜನತೆ ಶೀಘ್ರದಲ್ಲಿಯೇ ಬೀದಿಗಿಳಿಯಬೇಕಾಗುತ್ತದೆ. ಆಗ ನಾನು ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ಈ ಬಾರಿ ಮೋದಿಯವರ ಅಭಿವೃದ್ಧಿ ಹಾಗೂ ನಮ್ಮ ಕಾರ್ಯವೈಖರಿ ಪರಿಣಾಮ ಈ ಬಾರಿ ೨೦ ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಲೋಕಸಭಾ ಚುನಾವಣೆಗೆ ಸ್ವರ್ಧಿಸಿರುವ ಪ್ರಜ್ವಲ್ ರೇವಣ್ಣ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಮೊಮ್ಮಗನ ಪರವಾಗಿ ಮತಯಾಚನೆ ಮಾಡಿದರು.

ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ, ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜು ಹಾಗೂ ಬಿಜೆಪಿ ಮುಖಂಡ ಶ್ರೀಕಂಠಪ್ಪ ಮಾತನಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜೇಗೌಡ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಪ್ರಮುಖರಾದ ಮಹೇಶ್, ಎಚ್.ಇ.ಬೋರಣ್ಣ, ಎಂ.ಆರ್.ವಾಸಣ್ಣ, ನರಿಹಳ್ಳಿ ತಾತೇಗೌಡ, ಕೋಟಿ ಚಂದ್ರು, ತೋಟಿ ನಾಗರಾಜ್, ಎ.ಜಿ.ಪ್ರಭಾಕರ್, ರಮೇಶ್, ಶ್ರೀಕಂಠಪ್ಪ ಹಾಗೂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಗೆಲ್ಲಿಸಿ: ಮೈತ್ರಿ ಅಭ್ಯರ್ಥಿ ಪ್ರಜ್ವಲ್

ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಕಳೆದ ೫ ವರ್ಷಗಳ ಅವಧಿಯಲ್ಲಿ ರಾಜ್ಯದ ಏಳ್ಗೆಗಾಗಿ ಹತ್ತಾರು ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸಿದ್ದೇನೆ. ರಸ್ತೆ, ನೀರಾವರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ ಎಂದರು.

ಎಲ್ಲದಕ್ಕೂ ಮೊದಲು ಪಾತಾಳಕ್ಕೆ ಕುಸಿದಿದ್ದ ಕೊಬ್ಬರಿ ದರವನ್ನು ಮೇಲೆತ್ತಲು ದೇವೇಗೌಡರ ಮಾರ್ಗದರ್ಶನದಲ್ಲಿ ಸಾಕಷ್ಟು ಪಯತ್ನ ಮಾಡಿದ ಫಲವಾಗಿ ನೆಫೆಡ್ ಮೂಲಕ ಖರೀದಿ ವ್ಯವಸ್ಥೆಯಲ್ಲಿ ೧೨ ಸಾವಿರ ರು. ಬೆಲೆ ರೈತರಿಗೆ ಲಭ್ಯವಾಗುತ್ತಿದೆ. ಈ ದೇಶಕ್ಕೆ ಮೋದಿಯವರು ಮತ್ತೊಮ್ಮೆ ಬೇಕು. ಧರ್ಮದ ಉಳಿವಿಗೆ ಕೈಜೋಡಿಸಬೇಕು. ಸಣ್ಣ-ಪುಟ್ಟ ಲೋಪಗಳಿವೆ, ಸರಿಪಡಿಸಿಕೊಳ್ಳೋಣ. ದೇಶ ಹಾಗೂ ರಾಜ್ಯದ ಹೆಚ್ಚಿನ ಅಭಿವೃದ್ಧಿಗೆ ನಿಮ್ಮ ಬೆಂಬಲ ಅಗತ್ಯವಿದ್ದು ಚುನಾವಣೆಯಲ್ಲಿ ನಮ್ಮ ಪರ ನಿಲ್ಲಬೇಕು ಎಂದು ಕೇಳಿಕೊಂಡರು.