ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಶಿ ಹುಲಿಕುಂಟೆಮಠ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದ ಸರ್ಕಾರಿ ನೌಕರರ ಬಹು ನಿರೀಕ್ಷಿತ ಒಪಿಎಸ್ ಜಾರಿಗೆ ತರುವಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಎನ್‌ಪಿಎಸ್ ಬದಲಿ ಒಪಿಎಸ್ ಜಾರಿಗೆ ತರಲಿದೆ. ನುಡಿದಂತೆ ನಡೆಯುವುದೇ ನಮ್ಮ ಕಾಂಗ್ರೆಸ್ ಪಕ್ಷದ ಧ್ಯೇಯ ಎಂದು ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 5 ಜಿಲ್ಲೆ, 36 ತಾಲೂಕು, 34 ವಿಧಾನಸಭಾ ಕ್ಷೇತ್ರದಲ್ಲಿ 26ಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಈ ಬಾರಿ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ಖಚಿತ.
ಕಳೆದ ಅವಧಿಯಲ್ಲಿ ಪದವೀಧರ ಕ್ಷೇತ್ರದಿಂದ ಆಯ್ಕೆಗೊಂಡವರು ಏನು ಮಾಡಿದ್ದಾರೆ, ಅವರು ಸರ್ಕಾರಿ ನೌಕರರಿಗೆ ನೀಡಿದ ಭರವಸೆ ಎಷ್ಟು ಈಡೇರಿವೆ, ಸುಳ್ಳು ಆಶ್ವಾಸನೆ ನೀಡಿ ವಂಚಿಸಿದ್ದಾರೆ. ಈ ಬಾರಿ ಈ ತಪ್ಪುಮಾಡದೆ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡಿ. ನಿಮ್ಮ ಎಲ್ಲಾ ಸಮಸ್ಯೆಗೂ ಜತೆಯಾಗಿ ನಿಲ್ಲುವೆ ಎಂದರು.ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಪ್ರಸ್ತುತ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾಗಿಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಯುವ ನಾಯಕನಾಗಿ ಪಕ್ಷ ಸಂಘಟನೆ, ಹೋರಾಟ, ನಾಯಕತ್ವ ಗುಣವನ್ನು ಪರಿಗಣಿಸಿ ಪಕ್ಷ ಟಿಕೆಟ್ ನೀಡಿದೆ. ಕಳೆದ ಒಂದು ವರ್ಷಗಳ ಹಿಂದೆಯೇ ನಮ್ಮ ರಾಷ್ಟ್ರೀಯ ನಾಯಕ ರಾಹುಗಾಂಧಿ ಯುವ ಪಡೆಯನ್ನು ಕಟ್ಟುವ ಉದ್ದೇಶದಿಂದ ಪದವೀಧರ ಕ್ಷೇತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಮುಂಬರುವ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಸಂಭವವಿದ್ದು, ಎಲ್ಲಾ ಮತದಾರರು ಸಿದ್ದರಾಗಬೇಕು.
ಈ ಕ್ಷೇತ್ರದಲ್ಲಿ ಇದುವರೆಗೆ ಶಿಕ್ಷಕರಿಗೆ ಮತ್ತು ಪದವೀಧರರಿಗೆ ಸೂಕ್ತ ಸಹಕಾರ ಲಭಿಸದಿರುವ ಕುರಿತು ಗಮನ ಸೆಳೆದ ಅಭ್ಯರ್ಥಿ, ತಮ್ಮ ಪಕ್ಷವು ಅಧಿಕಾರದಲ್ಲಿರುವುದರಿಂದ ಮುಂಬರುವ ದಿನಗಳಲ್ಲಿ ಕ್ಷೇತ್ರಕ್ಕೆ ಹಾಗೂ ಮತದಾರರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿ, ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ವಿಶೇಷವಾಗಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಅನುದಾನರಹಿತ ಸಂಸ್ಥೆಗಳ ಶಿಕ್ಷಕರ ಕುಂದುಕೊರತೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಶ್ರಮಿಸುವುದಾಗಿ ತಿಳಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜು, ಪದವಿಪೂರ್ವ ಕಾಲೇಜು, ಕುವೆಂಪು ಶಾಲೆ, ವಿಶ್ವ ಭಾರತಿಶಾಲೆ, ಜಯಣ್ಣ ಬಿಇಡಿ ಕಾಲೇಜು, ಸ್ವಾಮಿವಿವೇಕನಂದ ಶಾಲೆ, ವಾರಿಯರ್ಸ್, ಆದರ್ಶ ಮುಂತಾದ ಶಾಲಾ,ಕಾಲೇಜಿಗೆ ಭೇಟಿ ನೀಡಿ ಮತಯಾಚಿಸಿದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಬಿ.ಟಿ.ರಮೇಶ್ ಗೌಡ, ಡಿ.ಟಿ.ಶ್ರೀನಿವಾಸ್, ಜಿ.ಟಿ.ವೀರಭದ್ರಸ್ವಾಮಿ, ಹುಲಿಕುಂಟೆ ಕಾಂತರಾಜ್, ಅನ್ವರ್ ಮಾಸ್ಟರ್, ಮಧುಕುಮಾರ್ ಇದ್ದರು.