ಸಾರಾಂಶ
ಚನ್ನಗಿರಿ : ತಾಲೂಕಿನ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಸಾಸಿವೆಹಳ್ಳಿ ಏತನೀರಾವರಿ ಯೋಜನೆಗೆ ಒಳಪಡುವ ಎಲ್ಲ ಕೆರೆಗಳಿಗೆ ಮುಂದಿನ ಎರಡು-ಮೂರು ದಿನಗಳಲ್ಲಿ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ 135 ಕೆರೆಗಳು ಒಳಪಡಲಿವೆ. ಕಾಮಗಾರಿಗೆ ₹446 ಕೋಟಿಯನ್ನು 2013ರಿಂದ 18ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿ, ಈ ಯೋಜನೆಗೆ ಒಳಪಡುವ ಎಲ್ಲ ಕೆರೆಗಳಿಗೂ 3 ಇಂಚಿನ ಪೈಪ್ ಅನ್ನು ಅಳವಡಿಸಲಾಗುತ್ತಿತ್ತು. ಇದಾದ ನಂತರ 2018ರಲ್ಲಿ ನಾನು ಶಾಸಕನಾದಾಗ ಈ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಂದ 3 ಇಂಚಿನ ಪೈಪ್‌ನಿಂದ ಕೆರೆ ತುಂಬಲು ಸಾಧ್ಯವೇ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು ಎಂದರು.
ಈ ಹಿನ್ನಲೆಯಲ್ಲಿ ನಾನು ಕೂಡ ಗಮನಿಸಿ, ಆಗ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ನೀರಾವರಿ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು, ₹170 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿದ್ದೆ. ಈ ಯೋಜನೆಯ ಎಲ್ಲ ಕೆರೆಗಳಿಗೆ ಮತ್ತೊಂದು 3 ಇಂಚಿನ ಪೈಪ್ ಲೈನ್‌ಗಳನ್ನು ಅಳವಡಿಸಿ, ಪಂಪ್‌ನ ಸಾಮಥ್ಯವನ್ನೂ ಹೆಚ್ಚಿಸಲಾಗಿತ್ತು ಎಂದು ತಿಳಿಸಿದರು.
ಈ ಕಾಮಗಾರಿ ಮತ್ತು ಹೆಚ್ಚುವರಿ ಪೈಪ್ ಅಳವಡಿಕೆ ಕಾಮಗಾರಿ ಈಗಾಗಲೇ ಪೂರ್ಣಗೊಂಡು ನೀರನ್ನು ಹರಿಸಬೇಕಾಗಿತ್ತು. ಆದರೆ, ಹೊನ್ನಾಳಿಯ ಬಳಿ ಇರುವ ಪಂಪ್ ಹೌಸ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಒಂದು ಕಂಬಕ್ಕೆ ಅಲ್ಲಿನ ಜಮೀನಿನ ಮಾಲೀಕ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರಿಂದ ತಡವಾಗಿತ್ತು. ಪ್ರಸ್ತುತ ಕೋರ್ಟ್ ತಡೆಯಾಜ್ಞೆ ತೆರವುಗೊಂಡು, ವಿದ್ಯುತ್ ಸಂಪರ್ಕ ಕಲ್ಪಿಸಿ ಅಧಿಕಾರಿಗಳು ಟ್ರಯಲ್ ರನ್ ಮಾಡುತ್ತಿದ್ದಾರೆ. ನೀರು ಸಹಾ ಹೊನ್ನಾಳಿ ತಾಲೂಕಿನ ಚೀಲೂರಿನ ಬಳಿ ಬರುತ್ತಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮುಂದಿನ ಎರಡು ಮೂರು ದಿನಗಳಲ್ಲಿ ತಾಲೂಕಿನ ಕೆರೆಗಳಿಗೆ ನೀರು ಬರಲಿದೆ ಎಂದರು.
ತಕ್ಷಣವೇ ಕ್ಷೇತ್ರದ ಶಾಸಕರು ಸಹ ಜವಾಬ್ದಾರಿಯಿಂದ ಕೆರೆಗಳಿಗೆ ನೀರನ್ನು ಹರಿಸಲು ಪೂರಕವಾಗಿ ಶ್ರಮಿಸಬೇಕು. ರೈತರ ಆತಂಕ ನಿವಾರಿಸಬೇಕು. ಇಲ್ಲವಾದರೆ ರೈತರೊಂದಿಗೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೋಟ್ ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿಯ ಮೊದಲನೇ ಹಂತ ಪೂರ್ಣಗೊಂಡಿದೆ. ಕೆರೆಗಳಿಗೆ ನೀರನ್ನು ಹರಿಸಲು ಯಾವುದೇ ತೊಂದರೆಗಳಿಲ್ಲ. ಸಂತೆಬೆನ್ನೂರು-ಕಸಬಾ ಹೋಬಳಿಗಳಲ್ಲಿ ಕೆರೆಗಳು ತುಂಬದೇ ಅಂತರ್ಜಲ ಮಟ್ಟ ಕುಸಿಯುವ ಭೀತಿಯಲ್ಲಿ ರೈತರಿದ್ದಾರೆ
- ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ