ರೈತರ ಹಿತಾಸಕ್ತಿ ಕಾಪಾಡಲು ಹೋರಾಟ ಅನಿವಾರ್ಯ: ರಮೇಶ್ ರಾಜು

| Published : Dec 26 2024, 01:02 AM IST

ರೈತರ ಹಿತಾಸಕ್ತಿ ಕಾಪಾಡಲು ಹೋರಾಟ ಅನಿವಾರ್ಯ: ರಮೇಶ್ ರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಅವರು ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಎಲ್ಲಾ ತಾಲೂಕುಗಳಲ್ಲಿ ಸಮಿತಿ ರಚನಾ ಕಾರ್ಯ ಮಾಡಿ ಈ ಭಾಗದ ರೈತರ ನೈಜ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಸಂಘಟನೆ ಮಾಡಬೇಕಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಉಡುಪಿ

ಸರ್ಕಾರಗಳು ರೈತರನ್ನು ಕೇವಲ ಓಟ್ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿವೆ. ಉಚಿತದ ಹೆಸರಿನಲ್ಲಿ ರೈತರಿಗೆ ಅನುಕೂಲಕರವಾಗಿದ್ದ ಅನೇಕ ಯೋಜನೆಗಳನ್ನು ಕೈ ಬಿಟ್ಟಿದೆ. ರೈತರಿಗೆ ತಮ್ಮ ಹಿತಾಸಕ್ತಿ ಕಾಪಾಡುವುದಕ್ಕೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ್ಯಾಧ್ಯಕ್ಷ ರಮೇಶ್ ರಾಜು ಅಭಿಪ್ರಾಯಪಟ್ಟರು. ಅವರು ಮಂಗವಾರ ನಡೆದ ಉಡುಪಿ ಜಿಲ್ಲಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದರು.ಹಿಂದೆ ರೈತರ ಕೃಷಿ ಪಂಪುಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ ವಿದ್ಯುತ್ ಸಂಪರ್ಕ, ಕಂಬ, ತಂತಿ, ಟ್ರಾನ್ಸ್‌ಫಾರ್ಮರ್‌ಗಳ ಎಲ್ಲಾ ವೆಚ್ಚವನ್ನು ರೈತರೇ ಭರಿಸಬೇಕಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿದ ಬಡವರಿಗೆ ನೀಡಲಾಗುತ್ತಿದ್ದ ಬಾವಿ, ಮೋಟರ್‌ ಅನುದಾನವನ್ನೇ ನಿಲ್ಲಿಸಲಾಗಿದೆ. ಬಿತ್ತನೆ ಬೀಜಕ್ಕೆ ಮಾರುಕಟ್ಟೆ ದರಕ್ಕಿಂತ ಹೆಚ್ಚು ಪಾವತಿಸಬೇಕಾಗಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುವ ಸಾವಯವ ಮಿಷನ್ ಯೋಜನೆ ನಿಂತಿದೆ. ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಗೊಳಿಸುವ ಕೃಷಿಬೆಲೆ ಆಯೋಗ ನೇಮಕಾತಿ ಇಲ್ಲದೆ ಮೂಲೆಗೆ ಸೇರಿದೆ ಎಂದವರು ತೀವ್ರ ಆಸಮಾಧಾನ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ನೀಡಿ ಬೆಲೆ ನಿಗದಿಸಿ, ಖರೀದಿ ಕೇಂದ್ರ ತೆರೆದು ರೈತರ ಫಸಲನ್ನು ಖರೀದಿಸಲಾಗುತ್ತಿತ್ತು. ಆದರೆ ಈಗ ಖರೀದಿಗೆ ವ್ಯವಸ್ಥೆಯನ್ನೇ ನಿಲ್ಲಿಸಲಾಗಿದೆ. ರೈತರ ಸಮಸ್ಯೆಗಳಿಗೆ ಸರ್ಕಾರ ಕಿವುಡಾಗಿದೆ. ಆದ್ದರಿಂದ ರೈತರು ಬೀದಿಗಿಳಿದು ಹೋರಾಟ, ಆಂದೋಲನಗಳ ಮೂಲಕ ಸರ್ಕಾರವನ್ನು ಎಬ್ಬಿಸಬೇಕಾಗಿರುವುದು ದುರಂತ. ಆ ಕಾರಣಕ್ಕೆ ಎಲ್ಲಾ ಜಿಲ್ಲೆಗಳಲ್ಲೂ ಭಾಕಿಸಂ ನೇತ್ರತ್ವದಲ್ಲಿ “ರೈತ ಘರ್ಜನ ರ್‍ಯಾಲಿ” ಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಅವರು ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಎಲ್ಲಾ ತಾಲೂಕುಗಳಲ್ಲಿ ಸಮಿತಿ ರಚನಾ ಕಾರ್ಯ ಮಾಡಿ ಈ ಭಾಗದ ರೈತರ ನೈಜ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಸಂಘಟನೆ ಮಾಡಬೇಕಾಗಿದೆ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಇರ್ವತ್ತೂರು ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ನವೀನ್ ಚಂದ್ರ ಜೈನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸಭೆಗೆ ಸ್ವಾಗತಿಸಿ, ನಿರ್ವಹಿಸಿದರು.