ನೇಕಾರರ ಸಂಕಷ್ಟಗಳ ಪರಿಹಾರಕ್ಕೆ ಹೋರಾಟ ಅನಿವಾರ್ಯ

| Published : Nov 19 2024, 12:45 AM IST

ನೇಕಾರರ ಸಂಕಷ್ಟಗಳ ಪರಿಹಾರಕ್ಕೆ ಹೋರಾಟ ಅನಿವಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಸತತ 24 ವರ್ಷಗಳಿಂದ ನೇಕಾರರ ಸಂಕಷ್ಟಗಳನ್ನು ಸರ್ಕಾರಗಳ ಗಮನಕ್ಕೆ ತಂದು ಪರಿಹಾರ ಒದಗಿಸುವ ಕೆಲಸ ಮಾಡುತ್ತಿರುವ ನೇಕಾರರ ಹೋರಾಟ ಸಮಿತಿಯ ಕಾರ್ಯ ಶ್ಲಾಘನೀಯ. ಕಳೆದ 44 ದಿನಗಳಿಂದ ನಿರಂತರವಾಗಿ ನೇತ್ರ ತಪಾಸಣೆ ಮತ್ತು ಚಿಕಿತ್ಸೆಯ ಮಹತ್ವದ ಕೆಲಸವನ್ನು ಸಂಘಟನೆ ವ್ಯವಸ್ಥಿತವಾಗಿ ನಿರ್ವಹಿಸಿದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ದೊಡ್ಡಬಳ್ಳಾಪುರ: ಸತತ 24 ವರ್ಷಗಳಿಂದ ನೇಕಾರರ ಸಂಕಷ್ಟಗಳನ್ನು ಸರ್ಕಾರಗಳ ಗಮನಕ್ಕೆ ತಂದು ಪರಿಹಾರ ಒದಗಿಸುವ ಕೆಲಸ ಮಾಡುತ್ತಿರುವ ನೇಕಾರರ ಹೋರಾಟ ಸಮಿತಿಯ ಕಾರ್ಯ ಶ್ಲಾಘನೀಯ. ಕಳೆದ 44 ದಿನಗಳಿಂದ ನಿರಂತರವಾಗಿ ನೇತ್ರ ತಪಾಸಣೆ ಮತ್ತು ಚಿಕಿತ್ಸೆಯ ಮಹತ್ವದ ಕೆಲಸವನ್ನು ಸಂಘಟನೆ ವ್ಯವಸ್ಥಿತವಾಗಿ ನಿರ್ವಹಿಸಿದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನೇಕಾರರ ಹೋರಾಟ ಸಮಿತಿ ಹಾಗೂ ನವೋದಯ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಕಳೆದ ಅ.2ರಂದು ಗಾಂಧಿ ಜಯಂತಿಯಂದು ಆರಂಭವಾಗಿದ್ದ ನೇತ್ರ ತಪಾಸಣಾ ಶಿಬಿರ 44 ದಿನಗಳ ಬಳಿಕ ಕೊನೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

50 ವರ್ಷ ವಯಸ್ಸಾದ ನಂತರ ದೇಹದ ಆರೋಗ್ಯದ ಬಗ್ಗೆ ಸಾರ್ವಜನಿಕರು ಕಾಳಜಿ ವಹಿಸಬೇಕು. ಕೆಲವು ಆಸ್ಪತ್ರೆಗಳಲ್ಲಿ ಸಂಘಟನೆಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಇರುತ್ತದೆ. ಅದನ್ನು ಬಡವರು ಹಾಗು ಅಶಕ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಸ್ತುತ ಸರ್ಕಾರ ನೇಕಾರರಿಗಾಗಿ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಿರುವುದು ಸೇರಿದಂತೆ ಹಲವಾರು ನೇಕಾರ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ ಎಂದರು.

ಪಡಿತರ ಚೀಟಿ ರದ್ದತಿ ಬಗ್ಗೆ ಕೆಲವೊಂದು ನಿಯಮಗಳಿವೆ ಅದರಂತೆ ಸರ್ಕಾರ ಕ್ರಮ ಕೈಗೊಂಡಿದೆ. ತಾಲೂಕಿನಲ್ಲಿ ಕೆಲ ಕಡು ಬಡವರ ಪಡಿತರ ಚೀಟಿ ರದ್ದಾಗಿರುವುದು ಗಮನಕ್ಕೆ ಬಂದಿದೆ. ಅದನ್ನು ಕೂಡಲೆ ಪರಿಹರಿಸಲು ಪ್ರಯತ್ನಿಸಲಾಗುವುದು. ನೇಕಾರ ಹೋರಾಟ ಸಮಿತಿ ಬರೀ ಹೋರಾಟಕ್ಕೆ ಸೀಮಿತವಾಗದೆ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ಹಾಗೂ ಹಲವಾರು ಮಂದಿಗೆ ಉಚಿತ ಕನ್ನಡಕ ವಿತರಣೆಯಂತ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಗಮನಾರ್ಹ ಸಂಗತಿ ಎಂದರು.

ಮಾಜಿ ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ ಮಾತನಾಡಿ, ಹೋರಾಟಗಳ ಮೂಲಕ ನೇಕಾರರ ಹೋರಾಟ ಸಮಿತಿಯು ನೇಕಾರರ ಸಂಕಷ್ಟಕ್ಕೆ ಸ್ಪಂದಿಸಿದೆ. ನೇಯ್ದೆ ಉದ್ಯಮದಲ್ಲಿ ದೊಡ್ಡಬಳ್ಳಾಪುರ ದೇಶದಲ್ಲೇ ಪ್ರಖ್ಯಾತಿಯಾಗಿದೆ. ಆದರೆ ತನ್ನದೇ ಆದ ಬ್ರಾಂಡ್‌ ಹೊಂದಲು ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನ ಹರಿಸಬೇಕಿದೆ. ಜಗತ್ತಿಗೆ ವಸ್ತ್ರಗಳನ್ನು ನೇಯ್ದು ಕೊಟ್ಟ ನೇಕಾರರ ಬದುಕು ದುಸ್ತರದಲ್ಲಿದೆ. ಇದಕ್ಕೆ ಸರ್ಕಾರಗಳು ಇನ್ನಷ್ಟು ಉತ್ತೇಜನ ಕೊಡಬೇಕು. ನಗರಸಭೆ ವತಿಯಿಂದ ನೇಕಾರ ಭವನಕ್ಕೆ ಜಿ.ಕೆ.ವ್ಯಾಲಿ ಬಡಾವಣೆಯಲ್ಲಿ ನಿವೇಶನ ಗುರ್ತಿಸಿದೆ ಜೊತೆಗೆ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ಅನುದಾನವನ್ನು ನೀಡಲು ನಗರಸಭೆ ಸಿದ್ಧವಿದೆ. ನೇಕಾರ ಮುಖಂಡರು ಸರ್ಕಾರದ ಜೊತೆ ವ್ಯವಹರಿಸಿ ಮಂಜೂರಾತಿಗೆ ಪ್ರಯತ್ನಿಸಬೇಕಿದೆ ಎಂದರು.

ನೇಕಾರರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ, ಸಮಿತಿ ಪ್ರಾರಂಭವಾಗಿ 25ನೇ ವರ್ಷದತ್ತ ಸಾಗುತ್ತಿದೆ. ಸಮಿತಿಯ ನಿರಂತರ ಹೋರಾಟಗಳಲ್ಲಿ ಸರ್ಕಾರಗಳ ಗಮನ ಸೆಳೆದು, ನೇಕಾರರ ಸಂಕಷ್ಟಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನೇಕಾರರ ಹಲವು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ. ನೇಕಾರ ಹೋರಾಟ ಸಮಿತಿ ಆಶ್ರಯದಲ್ಲಿ ಸುಮಾರು 44 ದಿನಗಳ ಕಾಲ ಉಚಿತ ನೇತ್ರ ತಪಾಸಣೆಯನ್ನು ನಡೆಸಿ ನೂರಾರು ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ ಎಂದರು.

ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ದೃಷ್ಟಿ ವಿಭಾಗದ ಜಿಲ್ಲಾ ಸಂಯೋಜಕ ವಿಜಯ್ ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಮಂಗಳ ಗೌರಿ ಪರ್ವತಯ್ಯ, ವಿಷನ್ ಸ್ವಿಂಗ್ ಸಂಸ್ಥೆಯ ಪ್ರಸನ್ನ ಕುಮಾ‌ರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ರೇವತಿ ಅನಂತರಾಮ್, ನಗರಸಭಾ ಸದಸ್ಯರಾದ ಅಲ್ತಾಫ್‌, ನಾಗರಾಜ್‌, ಆನಂದ್, ಮುಖಂಡರಾದ ನೆಲ್ಲೂರ್ ಸುಬ್ರಹ್ಮಣ್ಯನ್, ದೇವಲೋಕಂ ಜಗದೀಶ್, ಬಂಡಾ ಮಂಜುನಾಥ್, ಕೆ ಜಿ ಗೋಪಾಲ್, ಜೆ.ಎಸ್.ಮಂಜುನಾಥ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಫೋಟೋ-

18ಕೆಡಿಬಿಪಿ7- ದೊಡ್ಡಬಳ್ಳಾಪುರದಲ್ಲಿ ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮತ್ತಿತರರು ಭಾಗಿಯಾದರು.