ಸಂವಿಧಾನ ಆಶಯ ಉಳಿಸಿಕೊಳ್ಳಲು ಹೋರಾಟ ಅಗತ್ಯ: ನ್ಯಾ. ಗೋಪಾಲಗೌಡ

| Published : Apr 08 2024, 01:01 AM IST

ಸಂವಿಧಾನ ಆಶಯ ಉಳಿಸಿಕೊಳ್ಳಲು ಹೋರಾಟ ಅಗತ್ಯ: ನ್ಯಾ. ಗೋಪಾಲಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನದ ಆಶಯಗಳು ಮತ್ತು ಭಾವೈಕ್ಯತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು 2ನೇ ಸ್ವಾತಂತ್ರ್ಯ ಹೋರಾಟ ಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಪ್ರತಿಪಾದಿಸಿದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೀಪಲ್ಸ್ ಲಾಯರ್ಸ್ ಗಿಲ್ಡ್ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಸಹಯೋಗದಲ್ಲಿ ಭಾನುವಾರ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನದ ಆಶಯಗಳು ಮತ್ತು ಭಾವೈಕ್ಯತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ನೋಡಿದಾಗ, ಹೋರಾಟಗಳು ನಡೆದಿದ್ದರಿಂದ ಮಾತ್ರ ಅನೇಕ ಬದಲಾವಣೆಗಳಾಗಲು ಸಾಧ್ಯವಾಯಿತು ಎಂದು ಸಾಬೀತಾಗಿದೆ. ಸ್ವಾತಂತ್ರ್ಯ ಹೋರಾಟದಂತಹ ತೀವ್ರ ತರವಾದ ಹೋರಾಟ ಬೇಕಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ.

ಎಲ್ಲಾ ಮಹಿಳೆಯರಿಗೆ, ದುರ್ಬಲರಿಗೆ ಸಂವಿಧಾನ ಆಶಯ ತಲುಪಿಸಿದ್ದಿರಿ ಎಂದು ಸರ್ಕಾರಗಳನ್ನು ಪ್ರಶ್ನಿಸಿದಾಗ ಅವರಿಂದ ಉತ್ತರವಿಲ್ಲ. ಸ್ಟಾರ್ ಹೋಟೆಲ್ ಗಳಿಗಿಂತ ರುಚಿಯಾಗಿ ಬಿಸಿಯೂಟ ಅಡುಗೆ ಮಾಡುವ ಮಹಿಳೆಯರು ಅಡುಗೆ ಮಾಡುತ್ತಾರೆ. ಅದರೇ ಸರ್ಕಾರ ಅಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲದೆ ಉಪೇಕ್ಷೆ ಮಾಡುತ್ತಿದೆ. ನಮ್ಮ ನಡುವೆ ಇರುವುದು ನ್ಯಾಯ ನೀಡುವ ಆಡಳಿತಗಾರರಲ್ಲ, ಬಂಡವಾಳಶಾಹಿಗಳ ಏಜೆಂಟ್‌ಗಳು.

ರಾಜಕೀಯದವರಿಂದ ಸಾಮಾಜಿಕ ನ್ಯಾಯ ಸಿಗಲಾರದು. ಆದರೇ ಕೌಟುಂಬಿಕ ನ್ಯಾಯಾಲಯಗಳು ಕೂಡ ಸ್ವಾವಲಂಬಿ ಜೀವನ ನೀಡುವ ವ್ಯವಸ್ಥೆ ನಿರ್ಮಾಣ ಮಾಡಲಾಗದೆ ವರ್ಷಾನುಗಟ್ಟಲೆ ಎಳೆಯುತ್ತಾರೆ. ಹೃದಯವಂತಿಕೆಯೇ ಇಲ್ಲದ ಆಡಳಿತ ಸಮಾಜದ ವ್ಯವಸ್ಥೆಯಲ್ಲಿದೆ. ಆರ್ಥಿಕ ನ್ಯಾಯವಿಲ್ಲದೆ, ಸ್ವಾವಲಂಬಿ ಜೀವನ ನಡೆಸಲಾಗದೆಯೆ, ಪೌಷ್ಟಿಕ ಆಹಾರ ಸಿಗದೆ ಅನೇಕ ಹೆಣ್ಣು ಮಕ್ಕಳು ನಲುಗುತ್ತಿದ್ದಾರೆ. ಹೋರಾಟವಿಲ್ಲದೆ ಸುಲಭವಾಗಿ ನ್ಯಾಯ ಸಿಗುವುದಿಲ್ಲ ಎಂಬ ವಾತಾವರಣವಿದೆ ಎಂದರು.

ಸಾಮಾಜಿಕ ನ್ಯಾಯ ಸಿಗುವುದೇ ಆರ್ಥಿಕ ನ್ಯಾಯ ಸಿಕ್ಕಾಗ ಮಾತ್ರ. ಆರ್ಥಿಕ ನ್ಯಾಯ ಸಿಗುವುದೇ ಒಬ್ಬ ಅರ್ಹ ರಾಜಕೀಯ ಆಡಳಿತಗಾರರನ್ನು ಚುನಾಯಿಸಿದಾಗ ಮಾತ್ರ. ಇಂತಹ ಕಾರ್ಯಾಗಾರಗಳು ಸಂವಿಧಾನದ ಆಶಯ ತಿಳಿಸುವ ಹಾಗೂ ನಮ್ಮ ಜವಾಬ್ದಾರಿಗಳನ್ನು ತಿಳಿಸುವ ಪ್ರೇರಕ ವೇದಿಕೆಗಳಾಗಬೇಕಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ವಕೀಲರಾದ ಕೆ.ಪಿ.ಶ್ರೀಪಾಲ್ ಮಾತನಾಡಿ, ವಿವಿಧ ಬಣ್ಣಗಳ ಬಟ್ಟೆಯನ್ನು ಹೊಲೆದು ಸರ್ವ ಧರ್ಮಿಯ ವಾತಾವರಣ ನಿರ್ಮಾಣ ಮಾಡಲು ಅನೇಕ ಪ್ರಯತ್ನಗಳು ನಡೆಯುತ್ತಿದೆ. ವಿಶ್ವಮಾನವ ಸಂದೇಶ ಸಾರಿದ ಶಿವಮೊಗ್ಗದಲ್ಲಿ ಭಾವೈಕ್ಯತೆ ವಾತಾವರಣ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಸಭಿಕರಿಗೆ ಸಂವಿಧಾನ ಆಶಯ ಪುಸ್ತಕ ನೀಡಿ ಉದ್ಘಾಟಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ನಿರ್ದೇಶಕ ಫಾಧರ್ ಕ್ಲಿಪರ್ಡ್ ರೋಷನ್ ಪಿಂಟೊ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ,

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜಿ.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.