ಮಹಾನ್ ನಾಯಕರ ಹೋರಾಟ ಸರ್ವಕಾಲಕ್ಕೂ ಆದರ್ಶ: ಶಾಸಕ ಶಿವಲಿಂಗೇಗೌಡ

| Published : Oct 03 2024, 01:21 AM IST

ಮಹಾನ್ ನಾಯಕರ ಹೋರಾಟ ಸರ್ವಕಾಲಕ್ಕೂ ಆದರ್ಶ: ಶಾಸಕ ಶಿವಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿಯಂತಹ ಮಹಾನ್ ಚೇತನಗಳ ಜನ್ಮದಿನಾಚರಣೆಯನ್ನು ಆಚರಿಸಿದರೆ ಸಾಲದು, ಅವರ ತತ್ವ, ಸಿದ್ಧಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ನಿಜವಾದ ಗೌರವ ಸಮರ್ಪಿಸಿದಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯಂತಹ ಮಹಾತ್ಮರು ಈ ದೇಶ ಕಂಡ ಅಪ್ರತಿಮ ಚೇತನಗಳು. ಅವರಲ್ಲಿದ್ದ ದೇಶಾಭಿಮಾನ ರೈತಾಪಿ ವರ್ಗ ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದ ಜನತೆಯ ಸಬಲೀಕರಣಕ್ಕಾಗಿನ ಹೋರಾಟ ನಮ್ಮೆಲ್ಲರಿಗೂ ಇಂದಿಗೂ ಆದರ್ಶವಾಗಿದೆ ಎಂದು ರಾಜ್ಯ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದ ಹೊರವಲಯದಲ್ಲಿರುವ ಕಸ್ತೂರ ಬಾ ಶಿಬಿರದಲ್ಲಿ ತಾಲೂಕು ಆಡಳಿತ ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದಲ್ಲಿ ಮಧ್ಯಪ್ರದೇಶದ ಇಂದೂರ್ ಬಿಟ್ಟರೆ ಗಾಂಧೀಜಿ ಚಿತಾಭಸ್ಮದ ಸಮಾಧಿ ಇರುವ ಈ ಪುಣ್ಯ ಸ್ಥಳವನ್ನು ರಾಜ್ಯದಲ್ಲೇ ಪವಿತ್ರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

ಮಹಾತ್ಮ ಗಾಂಧಿಯ ತತ್ವ ,ಸಿದ್ಧಾಂತಗಳು ಒಂದು ದೇಶಕ್ಕೆ ಸೀಮಿತವಾಗದೇ ಇಡೀ ಪ್ರಪಂಚಕ್ಕೆ ಮಾದರಿಯಾಗಿವೆ. ಸತ್ಯ, ಅಹಿಂಸೆ, ಶಾಂತಿ, ಧರ್ಮ ಎಂಬ ಮೂಲಮಂತ್ರಗಳೊಂದಿಗೆ ಬಡವರು, ದೀನದಲಿತರು, ಅಸ್ಪೃಶ್ಯರಿಗೆ ನ್ಯಾಯ ಒದಗಿಸಿ ಸರ್ವರೂ ಸಮಾನರು ಎಂಬ ಸಂದೇಶ ಸಾರಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾಪುರುಷರಾಗಿದ್ದಾರೆ. ಗಾಂಧೀಜಿ ಚಿಂತನೆಗಳು ,ವಿಚಾರಧಾರೆಗಳು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.

ಭಾರತ ಶೇ. 72 ರಷ್ಟು ಭಾಗ ಗ್ರಾಮೀಣ ಪ್ರದೇಶದಿಂದ ಕೂಡಿದೆ. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯೇ ಗಾಂಧೀಜಿ ಕನಸಾಗಿತ್ತು .ಹಳ್ಳಿಗಳು ಅಭಿವೃದ್ಧಿ ಆಗದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ, ಆದ್ದರಿಂದ ರೈತರು ಆಧುನಿಕ ಹಾಗೂ ವೈಜ್ಞಾನಿಕ ಪದ್ಧತಿಯನ್ನು ತಮ್ಮ ವೃತಿಯಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮ ಗಾಂದೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರ ಜೀವನದ ಮೌಲ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ಹೇಳಿದರು.

ತಹಸೀಲ್ದಾರ್‌ ಸಂತೋಷ ಕುಮಾರ್‌ ಮಾತನಾಡಿ, ಸರಳ ಜೀವನ, ಉನ್ನತ ಮಟ್ಟದ ಚಿಂತನೆ, ಜನಪರ ನಿಲುವು, ಸರ್ವರಲ್ಲೂ ಸಮಾನತೆ ಕಾಣುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಮಾತ್ರ ಸಮಾಜ ಸದೃಢವಾಗಿ ಬೆಳೆಯಲಿದೆ ಎಂದು ಗಾಂಧೀಜಿ ಸಮಾಜಕ್ಕೆ ಸಂದೇಶ ನೀಡಿದ್ದರು, ಆದರೆ ಇದನ್ನು ನಾವು ಪಾಲಿಸುವುದಿರಲಿ, ಎಡವುತ್ತಾ ಬಂದಿರುವುದು ದೇಶದ ಪ್ರಗತಿಗೆ ಹಿನ್ನಡೆಯಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದ- ಭಾವ ತೋರದೆ ಸಮಾಜದಲ್ಲಿ ಸಹೋದರತ್ವ, ಸಾಮರಸ್ಯ ಭಾವನೆ ಮೂಡಿಸಿದ ಗಾಂಧೀಜಿ ಅವರ ಹೆಸರು ಅಜರಾಮರವಾಗಿದ್ದು, ಅವರ ಗುಣಗಳನ್ನು ನಾವು, ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಪ್ಲೋರೈಡ್‌ಯುಕ್ತ ನೀರನ್ನು ಮನಗಂಡು ಶಾಸಕರು ಶುದ್ಧ ಕುಡಿಯುವ ನೀರು ಒದಗಿಸಿದ್ದಾರೆ ಹಾಗೂ ಕಸ್ತೂರ ಬಾ ಶಿಬಿರದ ಅಭಿವೃದ್ಧಿಗೆ ಶ್ರಮವಹಿಸಿ ಜೀರ್ಣೋದ್ಧಾರ ಮಾಡಿರುವುದು ಶ್ಲಾಂಘನೀಯ ಎಂದರು.

ಅನಂತ ವಿದ್ಯಾಸಂಸ್ಥೆಯ ಚೇರ್ಮನ್‌ ಆರ್‌. ಅನಂತ್‌ಕುಮಾರ್ ಮಾತನಾಡಿ, ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿಯಂತಹ ಮಹಾನ್ ಚೇತನಗಳ ಜನ್ಮದಿನಾಚರಣೆಯನ್ನು ಆಚರಿಸಿದರೆ ಸಾಲದು, ಅವರ ತತ್ವ, ಸಿದ್ಧಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ನಿಜವಾದ ಗೌರವ ಸಮರ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌, ನಗರಸಭೆ ಉಪಾಧ್ಯಕ್ಷ ಮನೋಹರ್‌ ಮೇಸ್ತ್ರೀ , ಬಿಆರ್‌ಸಿ ಶಂಕರ್‌ , ತಾಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ಸತೀಶ್‌ , ಪೌರಯುಕ್ತ ಕೃಷ್ಣಮೂರ್ತಿ , ಸಮಾಜ ಕಲ್ಯಾಣಾಧಿಕಾರಿ ಪರಶಿವಮೂರ್ತಿ ,ಕ್ರೀಡಾಪಟು ರೈಲ್ವೆ ಮಹದೇವ್‌

ಗ್ರಾಪಂ ಅಧ್ಯಕ್ಷೆ ಹೇಮಾ ಶಿವಕುಮಾರ್‌ , ಕಸ್ತೂರ ಬಾ ಗಾಂಧಿ ಟ್ರಸ್ಟ್‌ ಪ್ರತಿನಿಧಿ ಸಾವಿತ್ರಿ ಹೊಸಮನಿ , ಅಕ್ಷರ ದಾಸೋಹ ಸಮಿತಿ ಯೋಗೀಶ್‌ , ದೈಹಿಕ ಪರಿವೀಕ್ಷಕ ವಸಂತ್‌ ಕುಮಾರ್‌ ಇನ್ನಿತರರು ಉಪಸ್ಥಿತರಿದ್ದರು.