ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಳೆದ ೩ ದಶಕಗಳಿಂದ ಕೈಮಗ್ಗ ನೇಕಾರರ ಮನೆಗಳ ಹಕ್ಕುಪತ್ರ, ಉತಾರ ನೀಡುವಂತೆ ಸಾಕಷ್ಟು ಹೋರಾಟ ನಡೆಸಿದರೂ ಫಲಪ್ರದವಾಗಿಲ್ಲ. ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಪಡಿಸುವುದು ಸಮಂಜಸವಲ್ಲವೆಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.ನೇಕಾರರ ೨೧ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರಂತರ ಉದ್ಯೋಗ ಕಲ್ಪಿಸುವತ್ತ ನೇಕಾರರಿಗೆ ಕಚ್ಚಾವಸ್ತು ಮತ್ತು ನೂಲು ಪೂರೈಸಬೇಕು. ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಕಾರ್ಮಿಕ ಸೌಲಭ್ಯ ಕಲ್ಪಿಸಬೇಕು. ವಯೋವೃದ್ಧ ನೇಕಾರರಿಗೆ ಮಾಸಾಶನ ₹೫ ಸಾವಿರ ನೀಡಬೇಕು. ಶಾಸಕ ಸವದಿ ಮನೆಯ ಕೂಗಳತೆಯಲ್ಲೇ ಧರಣಿ ನಡೆಸುತ್ತಿರುವ ನೇಕಾರರತ್ತ ಬಾರದ ಕಾರಣ ನಾವೇ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದೆವು. ಆಗ ನಡೆದ ಮಾತಿನ ಚಕಮಕಿಯಲ್ಲಿ ಸ್ವತಃ ಶಾಸಕರೇ ಅವರ ಸರ್ಕಾರದ ಅವಧಿಯಲ್ಲಿ ನಿಗಮದಲ್ಲಿ ಅವ್ಯವಹಾರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ನನ್ನ ಮೇಲೆ ನಾನೇ ತನಿಖೆಗೆ ಹೇಗೆ ಒತ್ತಾಯಿಸಲಿ ಎಂದು ಮುಜುಗರ ಪಟ್ಟು ಹೋರಾಟದ ವೇದಿಕೆಗೆ ಬಾರದೇ ಇದೀಗ ನೇಕಾರರಿಂದ ಸಂರಕ್ಷಿಸಿಕೊಳ್ಳಲು ಕೇವಲ ಶಿವಲಿಂಗ ಟಿರಕಿಯನ್ನು ಮಾತ್ರ ಗುರಿಯಾಗಿಸಿಕೊಂಡು ಇತರೆ ನೇಕಾರರ ಎತ್ತಿಕಟ್ಟಿ ಹೋರಾಟ ಹತ್ತಕ್ಕಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.ಶಾಸಕರ ರಕ್ಷಣೆಗೆ ಮುಂದಾಗಿರುವ ನೇಕಾರರು ಮೂವತ್ತು ವರ್ಷಗಳಲ್ಲಿ ಒಂದು ಹೊಸ ಮಗ್ಗ ಖರೀದಿಸಿದ, ಮನೆ ಕಟ್ಟಿಸಿಕೊಂಡಿರುವ, ಸಾಲ ಇಲ್ಲದಿರುವ ಮತ್ತು ವಾಸಿಸುತ್ತಿರುವ ಮನೆ, ಜಾಗೆಯ ಸಿಟಿಸರ್ವೇ ಉತಾರ ಪಡೆದ ದಾಖಲೆ ಇದ್ದರೆ ಕೊಡಲಿ. ರಾಜ್ಯಾದ್ಯಂತ ನೇಕಾರರ ಮೇಲಾಗುತ್ತಿರುವ ಅನ್ಯಾಯ ತಡೆಯಲು ಮತ್ತು ಕನಿಷ್ಟ ಸೌಲಭ್ಯಗಳಿಂದ ನೇಕಾರ ಬದುಕಲು ನೆರವಾಗಲು ನಾವು ನಮ್ಮದೇ ಬುತ್ತಿ, ನಮ್ಮದೇ ಬಸ್ ಚಾರ್ಸ್ ಘೋಷಣೆಯಡಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ನಮ್ಮ ಶಾಸಕರು ನೂರಾರು ಕೋಟಿ ಆಸ್ತಿ ಮಾಡಿರುವುದು ಮತ್ತು ಹೋರಾಟದ ೩ನೇ ಅಂಶವಾಗಿರುವ ನಿಗಮದಲ್ಲಿ ನೂರಾರು ಕೋಟಿ ರು. ಮೊತ್ತದ ಅವ್ಯವಹಾರ ಆಗಿರುವುದನ್ನು ಕೈಬಿಡಲು ಆಗ್ರಹಿಸುವುದು ತರವಲ್ಲ. ಅವ್ಯವಹಾರದಿಂದ ನಿಗಮ ಮುಚ್ಚುವ ಹಂತಕ್ಕೆ ಬಂದಿದೆ. ನೇಕಾರ ಧ್ವನಿಯಾಗಿರುವ ಶಾಸಕರು ಅವ್ಯವಹಾರ ಮಾಡಿಲ್ಲವಾದರೆ ಭಯ ಪಡುವ ಅಗತ್ಯವೇ ಇಲ್ಲ. ನಮ್ಮ ನೇಕಾರ ಬಾಂಧವರು ನ್ಯಾಯಕ್ಕಾಗಿ ಹೋರಾಟ ಮಾಡುವ ಮೂಲಕ ಕಟ್ಟಕಡೆ ವ್ಯಕ್ತಿಗೂ ಯೋಜನೆಗಳು ಮುಟ್ಟಲಿ ಎಂದು ಯಾರನ್ನೂ ಓಲೈಸದೇ ಪ್ರಾಮಾಣಿಕವಾಗಿ ನಮ್ಮದೇ ಬುತ್ತಿ, ನಮ್ಮದೇ ಬಸ್‌ಛಾರ್ಜನಲ್ಲಿ ನಡೆಸುತ್ತಿರುವ ಹೋರಾಟ ನಿರಂತರವಾಗಿರುತ್ತದೆ. ನಮ್ಮದು ಜಾತ್ಯಾತೀತ, ಪಕ್ಷಾತೀತವಾಗಿರುವ ಯಾವುದೇ ಸರ್ಕಾರವಿದ್ದರೂ ನಡೆಯುವ ಹೋರಾಟವಾಗಿದ್ದು, ನೈಜ ನೇಕಾರ ಬಾಂಧವರು ವಿಚಲಿತರಾಗದೇ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಸುತ್ತೇವೆ. ನೇಕಾರ ಹಿತಕ್ಕೆ ಯಾವುದೇ ಸಂಘಟನೆಗಳು ಬಂದರೂ ನಾವು ಸ್ವಾಗತಿಸುತ್ತೇವೆಂದರು.ಧರಣಿ ಸತ್ಯಾಗ್ರಹದಲ್ಲಿ ಬಸವರಾಜ ಜಾಲಿಕಟ್ಟಿ, ಮೋಹನ ನಾಜರೆ, ಶ್ರೀಶೈಲ ಗಂಜಾಳ, ಮಲೀಕ್ ಜಮಾದಾರ, ಶಿವಾನಂದ ಹುಂಚಾಳಮಠ, ವಸಂತ ಪೋರೆ, ಬಸವಂತ ಭಸ್ಮೆ, ರಫೀಕ್ ಮೋಮಿನ, ಮಲ್ಲೀಕ ಮೋಮಿನ, ಬಸಪ್ಪ ಅಮಟಿ, ಅಕ್ರಂ ಅಥಣಿ, ನಿರ್ಮಲಾ ಮುಳವಾಡ, ಗೈಬುಸಾಬ ಬೂದಿಹಾಳ, ಸಂತೋಷ ಕೋಷ್ಠಿ, ಜಹೀರಾ, ಕಸ್ತೂರಿ ಮಠದ, ಸಿರಾಜಬಿ ಮಹಾಲಿಂಗಪುರ, ಶಮೀಜಾ ಮುಲ್ಲಾ, ಫಾತೀಮಾ ನದಾಫ, ಅನಸೂಯ ಹೆಬ್ಬಾನಿ ಸೇರಿದಂತೆ ಅನೇಕರಿದ್ದರು.