ಎಸ್‌ಐಆರ್ ಹೆಸರಿನಲ್ಲಿ ನೈಜ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಕೋಟ್ಯಂತರ ಮತದಾರರನ್ನು ಮತದಾನದಿಂದ ದೂರವಿಟ್ಟು ಕೇಂದ್ರ ಸರಕಾರ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಜ್ಞಾನೇಶ್‌ಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷ ಕೂಡ ಉಗ್ರವಾಗಿ ಹೋರಾಟ ಕೈಗೆತ್ತಿಕೊಂಡಿದ್ದು ೩೦೦ಕ್ಕೂ ಹೆಚ್ಚು ಸಂಸದರೊಂದಿಗೆ ಪ್ರತಿಭಟನೆ ಕೈಗೊಂಡಿದೆ.

ಕನ್ನಡಪ್ರಭವಾರ್ತೆ ತಿಪಟೂರು

ದೇಶದಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೋಟ್ಯಂತರ ಓಟುಗಳು ಡಿಲೀಟ್ ಆಗಿದ್ದು ಇದಕ್ಕೆ ಕಾರಣಿಕರ್ತರಾದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ವಜಾಗೊಳಿಸಲು ಆಗ್ರಹಿಸಿ ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಇಡೀ ರಾಷ್ಟ್ರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ದೆಹಲಿಯಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ಅತ್ಯಂತ ಯಶಸ್ವಿಯಾಗಿದೆ. ಚುನಾವಣಾ ಆಯೋಗ ಫಾರಂ ನಂಬರ್ ೬, ೭, ಮತ್ತು ೮ ಅನ್ನು ಸರಿಪಡಿಸದಿದ್ದರೆ ಅರ್ಹ ಮತದಾರರಿಗೆ ನ್ಯಾಯ ದೊರಕುವುದಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಇದರ ವಿರುದ್ಧ ಬೃಹತ್ ಆಂದೋಲನ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು.

ಇಂದು ಯುವಕರೂ ಸೇರಿ ಎಲ್ಲ ಸಂಘಟನೆಗಳೂ ಹೋರಾಟ ಮಾಡುತ್ತಿದ್ದು ದೇಶದಾದ್ಯಂತ ಇಂಡಿ ಒಕ್ಕೂಟ ಪ್ರತಿದಿನ ಹೋರಾಟ ಮಾಡುತ್ತಿದೆ. ಇಲ್ಲಿ ಪ್ರಗತಿಪರ ಸಂಘಟನೆಗಳು ಆರಂಭಿಸಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ದೇಶದ ಜನರಿಗೆ ನ್ಯಾಯ ಸಿಗುವವರೆಗೂ, ಎಸ್‌ಐಆರ್ ಸಂಬಂಧಿಸಿದಂತೆ ನಮ್ಮ ಬೇಡಿಕೆ ಈಡೇರುವವರೆಗೂ ಈ ಹೋರಾಟವನ್ನು ನಿಲ್ಲಿಸಬಾರದು ಎಂದು ಹೇಳಿದರು.

ಪ್ರಗತಿಪರ ಸಂಘಟನೆಗಳ ಮುಖಂಡ ಅಲ್ಲಾ ಬಕ್ಷ ಮಾತನಾಡಿ ಎಸ್‌ಐಆರ್ ಹೆಸರಿನಲ್ಲಿ ನೈಜ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಕೋಟ್ಯಂತರ ಮತದಾರರನ್ನು ಮತದಾನದಿಂದ ದೂರವಿಟ್ಟು ಕೇಂದ್ರ ಸರಕಾರ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಜ್ಞಾನೇಶ್‌ಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷ ಕೂಡ ಉಗ್ರವಾಗಿ ಹೋರಾಟ ಕೈಗೆತ್ತಿಕೊಂಡಿದ್ದು ೩೦೦ಕ್ಕೂ ಹೆಚ್ಚು ಸಂಸದರೊಂದಿಗೆ ಪ್ರತಿಭಟನೆ ಕೈಗೊಂಡಿದೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ಮನವಿ ಸ್ವೀಕರಿಸಲು ನಿರಾಕರಿಸಿರುವುದು ವಿಷಾದಕರ. ಏಕೆಂದರೆ ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಲಕ್ಷಾಂತರ ಅರ್ಜಿಗಳು ಬಾಕಿ ಇದ್ದು ನಾವು ಮತ್ತೆ ಅರ್ಜಿ ಸಲ್ಲಿಸಿದರೂ ತಕ್ಷಣ ನ್ಯಾಯ ಸಿಗುವುದು ಅನುಮಾನ. ಆದ್ದರಿಂದ ಜ್ಞಾನೇಶ್‌ಕುಮಾರ್ ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಈ ಕೂಡಲೇ ಕೆಳಗಿಳಿಯಬೇಕು. ಎಸ್‌ಐಆರ್ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷೆ ಮೇಘಶ್ರೀ ಸುಜಿತ್ ಭೂಷಣ್, ಮಾಜಿ ಸದಸ್ಯರಾದ ಲೋಕನಾಥಸಿಂಗ್, ಮಹೇಶ್, ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ರಾಜಮ್ಮ, ಕಿರಣ್‌ರಾಜ್, ಶ್ರೀಕಾಂತ್ ಕೆಳಹಟ್ಟಿ ಇತರರು ಉಪಸ್ಥಿತರಿದ್ದರು.