ಕಡೂರನ್ನು ಜಿಲ್ಲಾ ಕೇಂದ್ರವಾಗಿಸುವ ಹೋರಾಟ ಆರಂಭ: ಕೆ.ಎಸ್.ಆನಂದ್

| Published : Aug 06 2024, 12:40 AM IST

ಕಡೂರನ್ನು ಜಿಲ್ಲಾ ಕೇಂದ್ರವಾಗಿಸುವ ಹೋರಾಟ ಆರಂಭ: ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಬರಪೀಡಿತ ಬಯಲು ಸೀಮೆ ಜನರಿಗೆ ತಾರತಮ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೆ ಜಿಲ್ಲಾ ಕೇಂದ್ರವಾಗಿದ್ದ ಕಡೂರು ಪಟ್ಟಣವನ್ನು ಮತ್ತೆ ಜಿಲ್ಲಾ ಕೇಂದ್ರ ಮಾಡುವ ಹೋರಾಟಕ್ಕೆ ಇಲ್ಲಿಂದಲೇ ನಾಂದಿ ಹಾಡಲಾಗುತ್ತದೆ ಎಂದು ಶಾಸಕ ಘೋಷಿಸಿದರು.

ಕಡೂರಿನ ತಾಪಂ ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಕರ್ತರ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಬರಪೀಡಿತ ಬಯಲು ಸೀಮೆ ಜನರಿಗೆ ತಾರತಮ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೆ ಜಿಲ್ಲಾ ಕೇಂದ್ರವಾಗಿದ್ದ ಕಡೂರು ಪಟ್ಟಣವನ್ನು ಮತ್ತೆ ಜಿಲ್ಲಾ ಕೇಂದ್ರ ಮಾಡುವ ಹೋರಾಟಕ್ಕೆ ಇಲ್ಲಿಂದಲೇ ನಾಂದಿ ಹಾಡಲಾಗುತ್ತದೆ ಎಂದು ಶಾಸಕ ಘೋಷಿಸಿದರು.

ತಾಲೂಕು ಪತ್ರಕರ್ತರ ಸಂಘ ಕಡೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಕರ್ತರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಚಿಕ್ಕಮಗಳೂರು ಎಂದಾಕ್ಷಣ ಮಲೆನಾಡು ಜಿಲ್ಲೆ ಎಂಬ ಭಾವನೆ ಮೂಡುತ್ತದೆಯೇ ಹೊರತು ಇದರಲ್ಲಿ ಬರಪೀಡಿತ ಕಡೂರು ತಾಲೂಕು ಇದೆ ಎಂಬುದು ತಿಳಿಯುವುದಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಾದರೆ ಹಿಂದಿನಿಂದಲೂ ಆಳುವವರ ಮೊದಲ ಪ್ರಾಶಸ್ಯ್ಯಮಲೆನಾಡಿನ ಕಾಫಿ, ಟೀ, ಸಾಂಬಾರು ಬೆಳೆ ನಷ್ಟದ ಬಗ್ಗೆ ಗಮನ ಹರಿಸುವುದು ಬಿಟ್ಟರೆ ನಮ್ಮ ಭಾಗದ ರಾಗಿ, ಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಬೇಳೆ,ಕಾಳುಗಳ ನಷ್ಟದ ಬಗ್ಗೆ ನಿರ್ಲಕ್ಷ್ಯತೋರುವುದು ವಿಪರ್ಯಾಸ ಎಂದರು.

ಅಲ್ಲದೆ ಯಾವುದೇ ಹೊಸ ಯೋಜನೆ ಪ್ರಕಟವಾದರೆ ಅದು ಕೇವಲ ಜಿಲ್ಲಾ ಕೇಂದ್ರಕ್ಕೆ ಹೋಗುವುದು ತಪ್ಪಬೇಕು. ಜಿಲ್ಲೆಯಲ್ಲಿ ಅತ್ಯುತ್ತಮ ಸಂಪರ್ಕ ವ್ಯವತೆ ಕಡೂರಿನಲ್ಲಿದೆ. ಹಾಗಾಗಿ ಜಿಲ್ಲೆಗೆ ಯಾವುದೇ ಸವಲತ್ತು ಬಂದರೆ ಅದನ್ನು ಕಡೂರು ತಾಲೂಕಿನಲ್ಲೂ ಅನುಷ್ಠಾನ ಮಾಡಲು ಸರ್ಕಾರ ಚಿಂತಿಸಬೇಕು. ಕಡೂರು ಮತ್ತೆ ಜಿಲ್ಲಾ ಕೇಂದ್ರವಾಗಬೇಕು ಎಂಬುದು ನಮ್ಮ ಆಶಯ. ಬಯಲು ಭಾಗದ ತಾಲೂಕುಗಳನ್ನೊಳಗೊಂಡ ಕಡೂರು ಜಿಲ್ಲಾಕೇಂದ್ರಕ್ಕೆ ನನ್ನ ಪ್ರಯತ್ನ ಆರಂಭವಾಗಿದ್ದು, ಜನಾಭಿಪ್ರಾಯ ಪಡೆಯಲು ಚಿಂತಿಸಿದ್ದೇನೆ ಎಂದರು.

ಪತ್ರಕರ್ತರ ಸಾಮಾಜಿಕ ಕಾಳಜಿಗೆ ಹಿರೇನಲ್ಲೂರು ಆರೋಗ್ಯ ಕೇಂದ್ರದ ಭೂಮಿ ಒತ್ತುವರಿ ಸುದ್ದಿ ಪ್ರಸ್ತಾಪಿಸಿದ ಶಾಸಕರು, ಆ ವಿಚಾರವನ್ನು ಜಿಲ್ಲಾ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದಾಗ 48 ಗಂಟೆಗಳಲ್ಲಿ ಆರೋಗ್ಯ ಕೇಂದ್ರದ ಜಾಗವನ್ನು ಎಸಿ ಯವರು ಅಳತೆ ಮಾಡಿಸಿ ರಕ್ಷಣೆ ಮಾಡಿದರು ಎಂದು ಸ್ಮರಿಸಿದರು.

ಪತ್ರಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ. ತಾಲೂಕಿನಲ್ಲಿ ಪತ್ರಕರ್ತರ ಭವನಕ್ಕೆ ಬೇಕಾಗುವ ನಿವೇಶನ ದೊರಕಿಸಿಕೊಡಲು ಕ್ರಮ ವಹಿಸುತ್ತೇನೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ತಮ್ಮ ಸಕ್ರಿಯ ರಾಜಕಾರಣದ ಮತ್ತು ಪುರಸಭೆ ಅಧ್ಯಕ್ಷ, ಸದಸ್ಯನಾಗಿ ಕೈಗೊಂಡ ಕಡೂರು ಪಟ್ಟಣದ ಮತ್ತು ತಾಲೂಕಿನ ಅಭಿವೃದ್ಧಿ ಯಶಸ್ಸಿನಲ್ಲಿ ಪತ್ರಕರ್ತರು ಮಾರ್ಗದರ್ಶಿ ಗಳಾಗಿದ್ದಾರೆ. ಆಡಳಿತದ‌ ಓರೆ ಕೋರೆಗಳನ್ನು ಬೆಳಕಿಗೆ ತರುವ ಪತ್ರಕರ್ತರ ಸೇವೆ ಶ್ಲಾಘನೀಯ ಎಂದರು.

ಶಿಕ್ಷಣ ತಜ್ಞ ಎನ್.ಪಿ.ಮಂಜುನಾಥ ಪ್ರಸನ್ನ ಸಾಮಾಜಿಕ ಪ್ರಜ್ಞೆ ಬೆಳೆಸುವಲ್ಲಿ ಪತ್ರಕರ್ತರ ಪಾತ್ರ ಕುರಿತು ಉಪನ್ಯಾಸ ನೀಡಿ, ನಮ್ಮ ನಡೆ ಮತ್ತು ನಾವು ನಡೆದುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಾದಾಗ ಜಾತ್ಯಾತೀತವಾಗಿ ಒಳ್ಳೆಯದು ಕೆಟ್ಟದನ್ನು ಎರಡನ್ನೂ ಸಮಾಜಕ್ಕೆತಿಳಿಸಿ ಸರಿದಾರಿಗೆ ತರುವವರೇ ಪತ್ರಕರ್ತರು ಎಂದರು.

ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ರಾಜಶೇಖರ್ ವರ್ಷದ ಪತ್ರಕರ್ತ-2024-25 ಪ್ರಶಸ್ತಿಯನ್ನು ಕನ್ನಡಪ್ರಭ ವರದಿಗಾರ ಕೆ.ಎನ್. ಕೃಷ್ಣಮೂರ್ತಿ ಅವರಿಗೆ ಪ್ರಧಾನ ಮಾಡಿ ಮಾತನಾಡಿದರು. ತಾಲೂಕು ಸಂಘದ ಅಧ್ಯಕ್ಷ ಎಂ.ಎನ್.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಪೂರ್ಣಿಮಾ, ಇಒ ಸಿ.ಆರ್.ಪ್ರವೀಣ್ ಮತ್ತಿತರರು ಇದ್ದರು.

5ಕೆಕೆಡಿಯು1.

ತಾಲೂಕು ಪತ್ರಕರ್ತರ ಸಂಘ ಕಡೂರಿನ ತಾಲೂಕು ಪಂಚಾಯ್ತಿ, ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಕರ್ತರ ದಿನಾಚರಣೆ ಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.

5ಕೆಕೆಡಿಯು1ಎ.

ತಾಲೂಕು ಪತ್ರಕರ್ತರ ಸಂಘದಿಂದ ಕಡೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಕರ್ತರ ದಿನಾಚರಣೆಯಲ್ಲಿ ಪತ್ರಕರ್ತ ಕೆ.ಎನ್.ಕೃಷ್ಣಮೂರ್ತಿಯವರಿಗೆ ವರ್ಷದ ಪತ್ರಕರ್ತ2024-25 ಪ್ರಶಸ್ತಿ ನೀಡಲಾಯಿತು. ಶಾಸಕ ಕೆ.ಎಸ್.ಆನಂದ್,ಭಂಡಾರಿ ಶ್ರೀನಿವಾಸ್, ಮಂಜುನಾಥ ಪ್ರಸನ್ನ, ಜಿ.ಎಂ.ರಾಜಶೇಖರ್,ಎಂ.ಎನ್.ಜಗದೀಶ್ ಮತ್ತಿತರರು ಇದ್ದರು.