ಈ ಬಾರಿ ಗಣೇಶನ ಪ್ರತಿಷ್ಠಾಪನೆಗಾಗಿ ಕೆಲವೊಂದು ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ಅನುಮತಿಗಾಗಿ ಯುವಕರು, ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವೊಂದು ಇಲಾಖೆಗಳ ಸಿಬ್ಬಂದಿ ಹಣ ಪೀಕಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣ ವಿವಿಧ ಬಡಾವಣೆ ಮತ್ತು ತಾಲೂಕಿನ ಹಲವು ಗ್ರಾಮಗಳಲ್ಲಿ ಗೌರಿ ಗಣೇಶ ಮೂರ್ತಿಗಳಲ್ಲಿ ಪ್ರತಿಷ್ಠಾಪಿಸಲು ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಲು ಹಬ್ಬದ ಸಿದ್ಧತೆ ನಡುವೆಯೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಗಣೇಶನ ಪ್ರತಿಷ್ಠಾಪನೆಗಾಗಿ ಕೆಲವೊಂದು ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ಅನುಮತಿಗಾಗಿ ಯುವಕರು, ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವೊಂದು ಇಲಾಖೆಗಳ ಸಿಬ್ಬಂದಿ ಹಣ ಪೀಕಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಹಾಗೂ ಸೆಸ್ಕಾಂ ಇಲಾಖೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಬರೆಯಬೇಕಾಗಿದೆ. ₹200 ಇ- ಸ್ಟ್ಯಾಂಪಿಂಗ್ ಹಾಗೂ ಜೆರಾಕ್ಸ್ ಗಾಗಿ ಅಂಗಡಿಗಳನ್ನು ಸುತ್ತುವಂತಾಗಿದೆ. ₹200 ಇ- ಸ್ಟ್ಯಾಂಪ್ ಗೆ ₹400 ಕೊಡಬೇಕು. ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ, ಪೊಲೀಸ್, ಅಗ್ನಿ ಶಾಮಕದಳದ ಅಧಿಕಾರಿಗಳು ಉಪಸ್ಥಿತಿ ಇದ್ದರೂ ಕೂಡ ಕೆಲವೊಂದು ದಾಖಲಾತಿಗಾಗಿ ಅಲೆದಾಟ ನಡೆಸುವಂತಾಗಿದೆ.

ಸೆಸ್ಕಾಂ ಇಲಾಖೆ ವತಿಯಿಂದ ಅನುಮತಿ ಪಡೆಯಲು ಎಲೆಕ್ಟ್ರಾನಿಕ್ ಗುತ್ತಿಗೆದಾರಿಂದ ಸಹಿ ಹಾಗೂ ಸೀಲು ಕಡ್ಡಾಯ ಎನ್ನುವುದನ್ನೆ ಬಂಡವಾಳವಾಗಿಸಿಕೊಂಡ ಗುತ್ತಿಗೆದಾರರು ಸೆಸ್ಕಾಂ ಕಚೇರಿ ಮುಂದೆಯೇ ಸಹಿ ಹಾಗೂ ಸೀಲು ಹಾಕಲು ಗಣೇಶೋತ್ಸವ ಸಮಿತಿಯ ಸದಸ್ಯರಿಂದ ರಾಜಾರೋಷವಾಗಿಯೇ ₹500 ಕೊಡಬೇಕೆಂದು ತಾಕೀತು ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ.

ಹಣ ವಸೂಲಿ ಬಗ್ಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಸೆಸ್ಕಾಂ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಸೆಸ್ಕಾಂನಿಂದ ಗಣೇಶ ಉತ್ಸವಕ್ಕೆ ಅನುಮತಿ ನೀಡಲು ಗುತ್ತಿಗೆದಾರರ ಸಹಿ ಕಡ್ಡಾಯವಾಗಿದೆ. ಆದರೆ, ಹಣ ವಸೂಲಿ ಬಗ್ಗೆ ಮಾಹಿತಿ ಇಲ್ಲ ಎಂದು ಸೆಸ್ಕಾಂ ಅಧಿಕಾರಿಗಳು ಕಂಡು ಕಾಣದಂತೆ ಮೌನರಾದರು.

ಯುವಕರು ಹಬ್ಬದ ಸಿದ್ಧತೆಗಳನ್ನು ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ತಾಲೂಕು ಕಚೇರಿಗೆ ಅಲೆದಾಟ ನಡೆಸಿ ಅನುಮತಿ ಪತ್ರ ಪಡೆದು ತಮ್ಮ ಗ್ರಾಮಗಳಿಗೆ ವಾಪಸ್ ಹಿಂತಿರುಗುತ್ತಿದ್ದಾರೆ. ಸೆಸ್ಕಾಂ ಕಚೇರಿ ಮುಂದೆ ಗುತ್ತಿಗೆದಾರರು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ₹500 ವಸೂಲಿ ಮಾಡುತ್ತಿರುವುದನ್ನು ಯುವಕರು, ಗ್ರಾಮಸ್ಥರು ಖಂಡಿಸಿದ್ದಾರೆ.

ತಾಲೂಕಿನಾದ್ಯಂತ ಕನಿಷ್ಠ 300ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಗುತ್ತಿಗೆದಾರರು ಲಕ್ಷಾಂತರ ರುಪಾಯಿ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ದೇವರ ಕಾರ್ಯಕ್ರಮ ಎಂಬ ಭಾವನೆಯೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಶುಲ್ಕವನ್ನು ಪಡೆದುಕೊಳ್ಳಲಿ. ಆದರೆ, ₹500 ಕೊಟ್ಟರೇ ಮಾತ್ರ ಸಹಿ ಹಾಕುತ್ತೇವೆ. ಇಲ್ಲದಿದ್ದರೆ ನಾವು ಹೋಗುತ್ತೇವೆ ಎಂಬ ನಿರ್ಧಾರ ಸರಿಯಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಾನೂನು ಸುವ್ಯವಸ್ಥೆಯಿಂದ ಅನುಮತಿ ಪಡೆಯುವುದು ಉತ್ತಮ ಬೆಳವಣಿಗೆಯಾದರೂ ಕೆಲವೊಂದು ದಾಖಲಾತಿಗಳನ್ನು ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ಅನುಮತಿ ಕೊಡಬೇಕು. ಸಾರ್ವಜನಿಕ ಅಲೆದಾಟ ತಪ್ಪಿಸಲು ಅನ್‌ಲೈನ್ ಅನುಮತಿ ಪಡೆಯುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಬೇಕೆಂದು ಯುವಕರು, ಸಾರ್ವಜನಿಕರು ಮನವಿ ಮಾಡಿದ್ದಾರೆ.