ವಕ್ಫ್‌ ಸಮಸ್ಯೆ ಪರಿಹಾರಕ್ಕೆ ನಾಳೆ ಹೋರಾಟ

| Published : Nov 21 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.22 ರಂದು ನವನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಣೆಗೆ ಒಳಗಾದ ಸಾರ್ವಜನಿಕರು, ರೈತರು, ಮಠಮಂದಿರಗಳು, ಶಾಲೆಗಳು ಹಾಗೂ ಸಾರ್ವಜನಿಕ ಆಸ್ತಿಗಳ ಕುರಿತು ಅಂದು ಬೆಳಗ್ಗೆಯಿಂದ ಸಂಜೆವರೆಗೆ ವೇದಿಕೆಗೆ ಬರಮಾಡಿಕೊಂಡು ಅಹವಾಲು ಸ್ವೀಕರಿಸಲಾಗುವುದು. ಜತೆಗೆ ಸಮಸ್ಯೆ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.22 ರಂದು ನವನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಣೆಗೆ ಒಳಗಾದ ಸಾರ್ವಜನಿಕರು, ರೈತರು, ಮಠಮಂದಿರಗಳು, ಶಾಲೆಗಳು ಹಾಗೂ ಸಾರ್ವಜನಿಕ ಆಸ್ತಿಗಳ ಕುರಿತು ಅಂದು ಬೆಳಗ್ಗೆಯಿಂದ ಸಂಜೆವರೆಗೆ ವೇದಿಕೆಗೆ ಬರಮಾಡಿಕೊಂಡು ಅಹವಾಲು ಸ್ವೀಕರಿಸಲಾಗುವುದು. ಜತೆಗೆ ಸಮಸ್ಯೆ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ನಮ್ಮ ಭೂಮಿ-ನಮ್ಮ ಹಕ್ಕು ಶೀರ್ಷಿಕೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಮಠಾಧೀಶರು ಸೇರಿದಂತೆ ಜಿಲ್ಲೆಯ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲರನ್ನು ಭೇಟಿ ಮಾಡುವುದರ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಪ್ರತಿಯೊಬ್ಬ ರೈತರು ಹಾಗೂ ಸಾರ್ವಜನಿಕರು ತಮ್ಮ ಜಾಗದ ಪಹಣಿಯನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದ ಒಂದು ತಂಡ, ವಿಪಕ್ಷ ನಾಯಕರಾದ ಆರ್.ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತವೆ. ಈ ಮೂರು ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ರೈತರು, ಮಠಮಾನ್ಯಗಳು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿದೆ. ಅವರ ಸಮಸ್ಯೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ ಹಾಗೂ ರಾಜ್ಯದ ಪ್ರಮುಖ ನಾಯಕರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ತಂಡವು 8-10 ಜಿಲ್ಲೆಗಳನ್ನು ಪ್ರವಾಸ ಮಾಡಲಿದೆ ಎಂದರು.

ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ವಕ್ಫ್ ಆಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಆ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಕಳೆದ ಹತ್ತಾರು ದಿನಗಳಿಂದ ಪಕ್ಷದೊಳಗೆ ಆಂತರಿಕ ಚರ್ಚೆ ನಡೆಸಿ ವ್ಯವಸ್ಥಿತವಾಗಿ ಜನರನ್ನು ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿ ಜಿಲ್ಲೆಯಲ್ಲೂ 5 ಜನರ ತಂಡ ರಚಿಸಲಾಗಿದೆ. ಈ ತಂಡದಲ್ಲಿ ವಕೀಲರು, ರೈತ ಮುಖಂಡರು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮಲ್ಲಯ್ಯ ಮೂಗನೂರಮಠ, ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಸುರಪುರ ಇದ್ದರು.

--------------

ಕೋಟ್‌...

ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ವಕ್ಫ್ ಆಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಆ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಕಳೆದ ಹತ್ತಾರು ದಿನಗಳಿಂದ ಪಕ್ಷದೊಳಗೆ ಆಂತರಿಕ ಚರ್ಚೆ ನಡೆಸಲಾಗಿದೆ.

- ಶಾಂತಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ