ಮತಬೇಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಿದ್ದಾಜಿದ್ದಿನ ಪೈಪೋಟಿ

| Published : Apr 14 2024, 01:45 AM IST

ಮತಬೇಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಿದ್ದಾಜಿದ್ದಿನ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ನವರು ಒಕ್ಕಲಿಗ ಮತಗಳನ್ನೇ ಕೇಂದ್ರೀಕರಿಸಿಕೊಂಡು ಮತಬೇಟೆಯಲ್ಲಿ ತೊಡಗಿದ್ದಾರೆ. ಜೆಡಿಎಸ್‌ಗೆ ಜಿಲ್ಲೆಯೊಳಗೆ ತನ್ನದೇ ಆದ ವೋಟ್‌ಬ್ಯಾಂಕ್ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವುದರಿಂದ ಜೆಡಿಎಸ್‌ಗೆ ಜಿಲ್ಲೆಯೊಳಗೆ ಅನುಕೂಲಕರ ವಾತಾವರಣವಿದೆ. ಬಿಜೆಪಿ ಮುಖಂಡರೆಲ್ಲರೂ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರಿಂದ ಆ ಪಕ್ಷದ ಮತಗಳೂ ಜೆಡಿಎಸ್‌ಗೆ ಹರಿದುಬರುವುದರಿಂದ ಗೆಲುವು ನಿಶ್ಚಿತವಾಗಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಇಬ್ಬರೂ ಮತಬೇಟೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿಗೆ ಇಳಿದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಜೆಡಿಎಸ್‌ಗೆ ಹೊಸ ಚೈತನ್ಯ ತುಂಬುವ ಸಲುವಾಗಿ ಸ್ವತಃ ಎಚ್.ಡಿ. ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಿ ಕದನ ಕಣಕ್ಕೆ ಇಳಿದಿದ್ದು, ಕಳೆದ ಬಾರಿಯ ಮಗನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ತೀವ್ರ ಹೋರಾಟ ನಡೆಸಿದ್ದಾರೆ. ಸ್ಟಾರ್ ಚಂದ್ರು ಅವರನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ಚುನಾವಣೆಯಲ್ಲಿ ಗೆದ್ದು ತಮ್ಮ ರಾಜಕೀಯ ಕಡುವೈರಿಯಾಗಿರುವ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಗರ್ವಭಂಗ ಮಾಡಲು ಪಣತೊಟ್ಟಿದ್ದಾರೆ.

ಇನ್ನು ಮಂಡ್ಯ ಜಿಲ್ಲೆಯವರು, ಬೆಂಗಳೂರಿನಲ್ಲಿ ಉದ್ಯಮ ಸಾಮ್ರಾಜ್ಯವನ್ನೇ ಕಟ್ಟಿರುವ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಕರೆತಂದು ಕಣಕ್ಕಿಳಿಸಿರುವ ಸಚಿವ ಚಲುವರಾಯಸ್ವಾಮಿ ದಳಪತಿಗಳನ್ನು ಕಟ್ಟಿಹಾಕಲು ತಂತ್ರ ರೂಪಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆ, 2023ರ ವಿಧಾನಸಭೆ ಚುನಾವಣೆಗಳಲ್ಲಿ ರೂಪಿಸಿದ್ದ ರಣತಂತ್ರಗಳಿಗೆ ವಿಭಿನ್ನವಾಗಿ ತಂತ್ರಗಾರಿಕೆ ರೂಪಿಸಿ ಎಚ್‌ಡಿಕೆಯನ್ನು ಮಣಿಸುವುದಕ್ಕೆ ಟೊಂಕ ಕಟ್ಟಿ ಹೋರಾಡುತ್ತಿದ್ದಾರೆ.

ಸ್ಟಾರ್ ಚಂದ್ರು ಅವರೊಟಿಗೆ ಮಂಡ್ಯ ಲೋಕಸಭಾ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿರುವ ಚಲುವರಾಯಸ್ವಾಮಿ ಅವರು ಶತಾಯ ಗತಾಯ ಮಂಡ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇಬೇಕೆಂಬ ಹಠಕ್ಕೆ ಬಿದ್ದವರಂತೆ ವಿಭಿನ್ನ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಜೆಡಿಎಸ್‌ನಲ್ಲಿ ಮುನಿಸಿಕೊಂಡಿರುವ ಅಸಮಾಧಾನಿತರನ್ನು ಭೇಟಿ ಮಾಡುತ್ತಿರುವ ಚಲುವರಾಯಸ್ವಾಮಿ ಅವರು, ಎಲ್ಲರನ್ನೂ ಕಾಂಗ್ರೆಸ್‌ಗೆ ತೆಕ್ಕೆಗೆ ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದರೆ, ಕುಮಾರಸ್ವಾಮಿಯವರೂ ಸಹ ಇದಕ್ಕೆ ಠಕ್ಕರ್ ನೀಡಿ ಜೆಡಿಎಸ್‌ನಲ್ಲಿದ್ದ ಕೆಲ ಅಸಮಾಧಾನಿತರನ್ನು ಭೇಟಿಯಾಗಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡುತ್ತಿದ್ದಾರೆ.

ಈ ಮಧ್ಯೆ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿದ್ದ ದಳಪತಿ ಅವರು ಬಂಡೇಳದಂತೆ, ತಮ್ಮ ವಿರೋಧಿ ನಿಲುವು ಅನುಸರಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಲತಾ ಅವರು ಬಿಜೆಪಿ ಸೇರ್ಪಡೆಗೊಂಡಿದ್ದು, ಸಹಜವಾಗಿ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಸನ್ನದ್ದರಾಗಿದ್ದಾರೆ.

ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿಯಲಿವೆ ಎಂಬುದು ಕಾಂಗ್ರೆಸ್ಸಿಗರ ಮಾತಾಗಿದೆ. ಮಹಿಳಾ ಓಟುಗಳು ಹೆಚ್ಚಾಗಿ ಕಾಂಗ್ರೆಸ್ ಕೈಹಿಡಿಯಲಿವೆ ಎಂಬ ನಂಬಿಕೆಯೂ ಇದೆ. ಅಲ್ಪಸಂಖ್ಯಾತರು, ದಲಿತರು, ಕುರುಬರು ತಮ್ಮ ಪರವಾಗಿರುವುದರಿಂದ ಗೆಲುವಿಗೆ ಅನುಕೂಲವಾಗಲಿದೆ ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ಕುಮಾರಸ್ವಾಮಿ ಪರವಾಗಿ ಜಿಲ್ಲೆಯಲ್ಲಿ ಒಂದು ಅಲೆಯೇ ಇದೆ. ಅದನ್ನು ಛಿದ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಒಕ್ಕಲಿಗರು ಒಗ್ಗಟ್ಟು ಪ್ರದರ್ಶಿಸಿದಾಗ ಪಕ್ಷ ಮತ್ತು ಜಾತಿ ಮೀರಿದ ಫಲಿತಾಂಶ ಹೊರಬೀಳಲಿದೆ ಎಂಬುದು ಜೆಡಿಎಸ್‌ನವರ ಮಾತಾಗಿದೆ. ಈ ಮಧ್ಯೆ ಮೈತ್ರಿ ಅಭ್ಯರ್ಥಿ ಪರವಾಗಿ ಬಿಜೆಪಿಯವರೂ ಸಹ ಪ್ರಚಾರ ನಡೆಸುತ್ತಿರುವುದು ಮೈತ್ರಿ ಅಭ್ಯರ್ಥಿಗೆ ಶಕ್ತಿ ಬಂದಂತಾಗಿದೆ. ಅಂತಿಮವಾಗಿ ಮತದಾರ ಯಾರ ಪರವಾಗಿ ತನ್ನ ನಿರ್ಧಾರ ಪ್ರಕಟಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

ಜೆಡಿಎಸ್‌ನವರು ಒಕ್ಕಲಿಗ ಮತಗಳನ್ನೇ ಕೇಂದ್ರೀಕರಿಸಿಕೊಂಡು ಮತಬೇಟೆಯಲ್ಲಿ ತೊಡಗಿದ್ದಾರೆ. ಜೆಡಿಎಸ್‌ಗೆ ಜಿಲ್ಲೆಯೊಳಗೆ ತನ್ನದೇ ಆದ ವೋಟ್‌ಬ್ಯಾಂಕ್ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವುದರಿಂದ ಜೆಡಿಎಸ್‌ಗೆ ಜಿಲ್ಲೆಯೊಳಗೆ ಅನುಕೂಲಕರ ವಾತಾವರಣವಿದೆ. ಬಿಜೆಪಿ ಮುಖಂಡರೆಲ್ಲರೂ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರಿಂದ ಆ ಪಕ್ಷದ ಮತಗಳೂ ಜೆಡಿಎಸ್‌ಗೆ ಹರಿದುಬರುವುದರಿಂದ ಗೆಲುವು ನಿಶ್ಚಿತವಾಗಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಿದ್ದು, ಕುಮಾರಸ್ವಾಮಿ ಅಭ್ಯರ್ಥಿಯಾಗಿರುವುದರಿಂದ ಒಕ್ಕಲಿಗರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಡೆಗೆ ಹರಿದುಹೋಗುವ ಸಾಧ್ಯತೆಗಳಿವೆ. ಅದಕ್ಕಾಗಿ ಅಹಿಂದ ಸೇರಿ ಇತರೆ ಹಿಂದುಳಿದ ವರ್ಗಗಳ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಆ ಸಮುದಾಯದ ಓಟುಗಳನ್ನು ಹಿಡಿದಿಟ್ಟುಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯಲ್ಲಿ ಒಕ್ಕಲಿಗರಿಗಿಂತಲೂ ಅಹಿಂದ ಮತ್ತು ಇತರೆ ಸಮುದಾಯದ ಮತಗಳ ಸಂಖ್ಯೆ ಹೆಚ್ಚಿರುವುದರಿಂದ ಹಾಗೂ ಆ ಸಮುದಾಯದವರೇ ನಿರ್ಣಾಯಕರಾಗುವುದರಿಂದ ಕಾಂಗ್ರೆಸ್ ಗೆಲುವಿಗೆ ಈ ಮತಗಳನ್ನು ಸಂಗ್ರಹಿಸಿಟ್ಟುಕೊಂಡರೆ ಗೆಲುವು ಸಾಧ್ಯವಾಗಲಿದೆ ಎನ್ನುವುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿದೆ. ಜೆಡಿಎಸ್-ಬಿಜೆಪಿ, ಕಾಂಗ್ರೆಸ್ ಲೆಕ್ಕಾಚಾರಗಳ ನಡುವೆ ಮತದಾರರ ಲೆಕ್ಕಾಚಾರ ಹೇಗಿರಲಿದೆ ಎನ್ನುವುದು ಏ.26ರಂದು ನಿರ್ಧಾರವಾಗಲಿದೆ.

ರಾಷ್ಟ್ರನಾಯಕರ ಬಿರುಸಿನ ಪ್ರಚಾರ:

ಮೈಸೂರಿನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದಲ್ಲಿ ಭಾಗವಹಿಸಿ ಹಳೆಯ ಮೈಸೂರು ಭಾಗದ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಬೂಸ್ಟ್‌ರ್ ಡೋಸ್ ನೀಡಲು ಮುಂದಾಗಿದ್ದರೆ, ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್‌ನವರೂ ಸಹ ಏ. 17ಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿಯವರನ್ನು ಕರೆತಂದು ಮಂಡ್ಯದಲ್ಲೇ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಂಡಿರುವುದು ಭಾರೀ ಕುತೂಹಲ ಕೆರಳಿಸಿದೆ. ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದ್ದು, ರಣಕಣ ನಿಧಾನವಾಗಿ ರಂಗೇರುತ್ತಿದೆ. ಕಳೆದ ಬಾರಿ ನಡೆದಂತೆ ಟಾಕ್‌ಫೈಟ್ ಈ ಬಾರಿಯೂ ಜೋರಾಗಿದ್ದು, ಇದು ಯಾವ ಮಟ್ಟಕ್ಕೆ ಹೋಗಲಿದೆ ಮತ್ತು ಇದರ ಲಾಭ ಯಾರಿಗೆ ಎಂಬುದರ ಬಗ್ಗೆ ಮತದಾರರು ನಿರ್ಧಾರ ಮಾಡಲಿದ್ದಾರೆ.