ಬಾಸುಂಡೆ ಬರುವಂತೆ ವಿದ್ಯಾರ್ಥಿಗೆ ಥಳಿತ: ದೂರು ದಾಖಲು

| Published : Jul 17 2025, 12:30 AM IST

ಸಾರಾಂಶ

ಸ್ಥಳೀಯ ವಿದ್ಯಾ ಸಂಸ್ಥೆಯೊಂದರ ದೈಹಿಕ ಶಿಕ್ಷಕ ಇಮಾಮ್‌ಸಾಬ್‌ ವಿದ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿಸಿದ್ದು, ಪಾಲಕರು ಶಹರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎರಡು ದಿನದ ಹಿಂದೆ ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿಯ ತಂದೆ ಮಹಮ್ಮದ್ ವಲಿಪಾಷ ತಿಳಿಸಿದ್ದಾರೆ.

ಸಿಂಧನೂರು: ಸ್ಥಳೀಯ ವಿದ್ಯಾ ಸಂಸ್ಥೆಯೊಂದರ ದೈಹಿಕ ಶಿಕ್ಷಕ ಇಮಾಮ್‌ಸಾಬ್‌ ವಿದ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿಸಿದ್ದು, ಪಾಲಕರು ಶಹರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎರಡು ದಿನದ ಹಿಂದೆ ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿಯ ತಂದೆ ಮಹಮ್ಮದ್ ವಲಿಪಾಷ ತಿಳಿಸಿದ್ದಾರೆ.

ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ದುದ್ದುಪುಡಿ ವಸತಿ ಶಾಲೆಯ ವಿದ್ಯಾರ್ಥಿ ಮಹಮ್ಮದ್‌ ಅಯಾನ್ 9ನೇ ತರಗತಿಯಲ್ಲಿ ಓದುತಿದ್ದು, ಹಾಸ್ಟೆಲ್ನಿಂದ ಓಡಿ ಹೋಗುತ್ತಾನೆ ಎಂದು ಶಿಕ್ಷಕರು ತಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.

ಹಿಂದೊಮ್ಮೆ ರಾತ್ರಿ 9 ಗಂಟೆಗೆ ತಮ್ಮ ಮಗನ ಮೇಲೆ ಹಲ್ಲೆ ಮಾಡಿ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ವಿಷಯ ತಿಳಿದು ಶಾಲೆಗೆ ಹೋಗಿ ವಿಚಾರಿಸಿದಾಗ ತಪ್ಪಾಗಿದೆ. ಇನ್ನೊಂದು ಸಾರಿ ಹೀಗಾಗದಂತೆ ನೋಡಿಕೊಳ್ಳುವುದಾಗಿ ಶಾಲೆಯ ಮುಖ್ಯಸ್ಥ ಡಿ.ರಾಮಕೃಷ್ಣಮೂರ್ತಿ ಹೇಳಿದ್ದರು. ಆದರೆ ಪುನಃ ಅದೇ ಕೃತ್ಯ ಎಸಗಿರುವುದರಿಂದ ಈಗ ತಾವು ದುದ್ದುಪೂಡಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ದೈಹಿಕ ಶಿಕ್ಷಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಮಹಮ್ಮದ್ ವಲಿಪಾಷ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆಗಾಗಿ ದುದ್ದುಪೂಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ರಾಮಕೃಷ್ಣಮೂರ್ತಿ ಮತ್ತು ಆಡಳಿತಾಧಿಕಾರಿ ಡಿ.ಸಂಧ್ಯಾರಾಣಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಕರೆಯನ್ನು ಸ್ವೀಕರಿಸಿಲ್ಲ.