ನೀನು ಇನ್ಮುಂದೆ ಓದಿನ ಖರ್ಚಿನ ಬಗ್ಗೆ ಚಿಂತೆ ಮಾಡಬಾರದು

ಕೊಪ್ಪಳ: ಪಿಯುಸಿಯಲ್ಲಿ ಶೇ. 98 ಅಂಕ ಗಳಿಸಿದ್ದರೂ ಬಡತನದಿಂದ ಓದು ನಿಲ್ಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಕೊಪ್ಪಳ ತಾಲೂಕಿನ ಕಾತರಗಿ ಗ್ರಾಮದ ವಿದ್ಯಾರ್ಥಿನಿ ಭೂಮಿಕಾ ಮೇಟಿ ಅವರಿಗೆ ಈಗ ವಿವಿಧೆಡೆಗಳಿಂದ ನೆರವು ಹರಿದು ಬರುತ್ತಿದೆ. ರೆಡ್ಡಿ ಜನಸಂಘ ಆ ವಿದ್ಯಾರ್ಥಿನಿಯ ವ್ಯಾಸಂಗದ ಸಂಪೂರ್ಣ ಖರ್ಚಿನ ಹೊರೆ ಹೊರಲು ಮುಂದಾಗಿದೆ.

ಪಿಯುಸಿಯಲ್ಲಿ ಶೇ. 98 ಅಂಕ, ಹೆಚ್ಚಿನ ಓದಿಗೆ ಅಡ್ಡಿ ಎನ್ನುವ ತಲೆಬರಹದಡಿ ''''ಕನ್ನಡಪ್ರಭ'''' ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ಹಲವರು ಸ್ಪಂದಿಸಿದ್ದಾರೆ.

''''ಕನ್ನಡಪ್ರಭ''''ದಲ್ಲಿ ವರದಿ ಗಮನಿಸಿದ ರೆಡ್ಡಿ ಜನಸಂಘದ ಪದಾಧಿಕಾರಿಗಳು, ಮುಖಂಡರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮಕ್ಕೆ ಭೇಟಿ ನೀಡಿ, ವಿದ್ಯಾರ್ಥಿ ಭೂಮಿಕಾ ಮೇಟಿ ಅವರನ್ನು ಸನ್ಮಾನಿಸಿ, ಬಡತನದಲ್ಲಿಯೂ ನಿನ್ನ ಶ್ರಮ ಮೆಚ್ಚುವಂತಹದ್ದೆ ಆಗಿದೆ, ಹೀಗಾಗಿ, ನೀನು ಇನ್ಮುಂದೆ ಓದಿನ ಖರ್ಚಿನ ಬಗ್ಗೆ ಚಿಂತೆ ಮಾಡಬಾರದು. ಕಾಲೇಜಿನ ಮತ್ತು ಹಾಸ್ಟೆಲ್ ಸಂಪೂರ್ಣ ವೆಚ್ಚ ನಾವು ಭರಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ ರೆಡ್ಡಿ ಜನ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ನಿರ್ದೇಶಕ ಶಾಂತರಾಜ್ ರೆಡ್ಡಿ, ವಾಸುದೇವ ರೆಡ್ಡಿ, ಕೆಜಿಎಫ್ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ರೆಡ್ಡಿ ಹಾಗೂ ಹುನಗುಂದ-ಇಲಕಲ್ ಅವಳಿ ತಾಲೂಕುಗಳ ರೆಡ್ಡಿ ಸಮಾಜದ ಆರ್‌ಆರ್‌ಪಿ ಸಂಘಟನೆ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್, ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಕಡುಬಡತನದ ಭೂಮಿಕಾ ಮೇಟಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 98 ಅಂಕ ಪಡೆದ ವಿದ್ಯಾರ್ಥಿನಿಗೆ ಸಹಾಯಸ್ತವಾಗಿ ಮುಂದಿನ ಶಿಕ್ಷಣ ಬಿಎಸ್‌ಸಿ ಅಗ್ರಿ ಕಲಿಸುವ ಜವಾಬ್ದಾರಿ ನೀಡುವುದಾಗಿ ಹೇಳಿದ್ದಾರೆ.

ಎರಡು ವರ್ಷದ ಶುಲ್ಕವನ್ನು ಪ್ರಭಾಕರ್ ರೆಡ್ಡಿ, ಶಾಂತರಾಜ್ ರೆಡ್ಡಿ, ವಾಸುದೇವ ರೆಡ್ಡಿ, ಪ್ರಸನ್ನ ಕುಮಾರ್ ರೆಡ್ಡಿ ಕೊಡ ಮಾಡುವ ವಾಗ್ದಾನ ಮಾಡಿದ್ದು, ಹುನಗುಂದ ಇಲಕಲ್ಲ ಅವಳಿ ತಾಲೂಕುಗಳ ರಡ್ಡಿ ಸಮಾಜ ಹಾಗೂ ರಾಷ್ಟ್ರಕೂಟ ರಡ್ಡಿ ಪರಿವಾರದಿಂದ ₹25,500 ಸಹಾಯಹಸ್ತ ನೀಡಿದ್ದಾರೆ.

ಕೊಪ್ಪಳ ಜಿಲ್ಲಾ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಬೀದರನ ಶ್ರೀನಿವಾಸ್ ರೆಡ್ಡಿ, ವೆಂಕಾರೆಡ್ಡಿ ವಕೀಲರು, ಕಾತರಕಿ ಗ್ರಾಮದ ಶಂಕರಗೌಡ ಹಿರೇಗೌಡ್ರ, ವೆಂಕನಗೌಡ ಹಿರೇಗೌಡ್ರು, ಕಾಶೀನಾಥ ರೆಡ್ಡಿ, ಮಂಜುನಾಥ ಮೇಟಿ, ಅಶೋಕ ನಾಗನಗೌಡ್ರ, ಎರಿಯಪ್ಪ ಗೌಡ ಹಾಗೂ ಗ್ರಾಮದ ಅನೇಕ ರೆಡ್ಡಿ ಸಮಾಜದ ಹಿರಿಯರು ಯುವಕರು ತಾಯಂದಿರು ಇದ್ದರು.

ಇದಲ್ಲದೆ ಈ ವಿದ್ಯಾರ್ಥಿಗೆ ''''ಕನ್ನಡಪ್ರಭ'''' ಅನೇಕ ಓದುಗರು ಸಹಾಯ ನೀಡಿದ್ದಾರೆ. ಇದರಿಂದ ಶೇ. 98ರಷ್ಟು ಅಂಕ ಪಡೆದಿದ್ದರೂ ಭೂಮಿಕಾ ಮೇಟಿ ಬಡತನದಿಂದ ಓದನ್ನೇ ನಿಲ್ಲಿಸುವ ಆತಂಕಗೊಂಡಿದ್ದರು. ಆದರೆ, ''''ಕನ್ನಡಪ್ರಭ'''' ವರದಿಯಿಂದ ವಿದ್ಯಾರ್ಥಿನಿಯ ಬಾಳಲ್ಲಿ ಹೊಸ ಬೆಳಕು ಮೂಡಿದಂತಾಗಿದೆ. ಶ್ರದ್ಧೆಯಿಂದ ಓದಿ, ಉತ್ತಮ ಸಾಧನೆ ಮಾಡಿದರೆ ಸಹಾಯ ಮಾಡುವವರು ಸಾವಿರಾರು ಜನರು ಇದ್ದಾರೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ.

ಮಗಳು ಶೇ. 98ರಷ್ಟು ಅಂಕ ಪಡೆದಿದ್ದರೂ ಓದಿಸುವ ಶಕ್ತಿ ಇಲ್ಲ ಎಂದು ನನಗೆ ಅತೀವ ದುಃಖವಾಗಿತ್ತು. ಆದರೆ ''''ಕನ್ನಡಪ್ರಭ''''ದಲ್ಲಿ ಈ ಕುರಿತು ವರದಿ ಬಂದಿದ್ದರಿಂದ ಅನೇಕರು ಸಹಾಯ ಮಾಡಿದ್ದರಿಂದ ನಮ್ಮ ಮಗಳ ಓದಿಸುವ ಚಿಂತೆ ದೂರವಾಗಿದೆ. ''''ಕನ್ನಡಪ್ರಭ''''ಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿದ್ಯಾರ್ಥಿನಿಯ ತಾಯಿ ಸವಿತಾ ಮೇಟಿ ತಿಳಿಸಿದ್ದಾರೆ.