ಸಾರಾಂಶ
ಹಾವೇರಿ: ವಾರದ ಹಿಂದೆ ಬೆಳಗಾವಿಯಲ್ಲಿ ಶಿಗ್ಗಾಂವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ಯುವತಿ ಶಿಲ್ಪಾ ಎಂಬ ದಲಿತ ಯುವತಿ ಆತ್ಮಹತ್ಯೆಗೆ ಅನ್ಯಕೋಮಿನ ವ್ಯಕ್ತಿಯ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿಯಲ್ಲಿ ಬಿಸಿಎ ಓದುತ್ತಿದ್ದ ವಿದ್ಯಾರ್ಥಿನಿ ಶಿಲ್ಪಾ ಏ. 12ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಇದಕ್ಕೆ ಶಿಗ್ಗಾಂವಿಯ ಪೀಠೋಪಕರಣ ಅಂಗಡಿ ಮಾಲೀಕ ರಂಜಾನ್ ನದಾಫ್ ಎಂಬಾತನ ಕಿರುಕುಳವೇ ಕಾರಣ ಎಂದು ಮೃತ ಶಿಲ್ಪಾಳ ಸ್ನೇಹಿತ ನವೀನ್ ಆರೋಪಿಸಿದ್ದಾರೆ. ಇದರೊಂದಿಗೆ ಪ್ರಕರಣ ತಿರುವು ಪಡೆದುಕೊಂಡಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರಮೋದ ಮುತಾಲಿಕ್ ಘಟನೆ ಖಂಡಿಸಿದ್ದು, ಆತ್ಮಹತ್ಯೆಗೆ ಕಾರಣನಾದ ಅನ್ಯ ಕೋಮಿನ ವ್ಯಕ್ತಿ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.ಏನಿದು ಪ್ರಕರಣ?: ಶಿಗ್ಗಾಂವಿ ತಾಲೂಕಿನ ಶಿಲ್ಪಾ ಹಾಗೂ ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಏ. 12ರಂದು ಬೆಳಗಾವಿಯ ಹಾಸ್ಟೆಲ್ ಒಂದರಲ್ಲಿ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಳು. ಇದಕ್ಕೆ ಫರ್ನಿಟರ್ ಅಂಗಡಿ ಮಾಲೀಕ ರಂಜಾನ್ ನದಾಫ್‌ನ ಕಿರುಕುಳವೇ ಕಾರಣ ಎಂದು ನವೀನ್ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನವೀನ್ ಮೇಲೆ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪ ಕೇಳಿ ಬಂದಿತ್ತು. ಇದರಿಂದ ಅಂಗಡಿ ಮಾಲೀಕ ರಂಜಾನ್ ನದಾಫ್ ನವೀನ್ ಮೇಲೆ ಸಿಟ್ಟಾಗಿದ್ದ. ಈ ವೇಳೆ ನವೀನ್ ಮೊಬೈಲ್ ಕಸಿದುಕೊಂಡಿದ್ದ ರಂಜಾನ್, ನವೀನ್ ಹಾಗೂ ಶಿಲ್ಪಾ ನಡುವೆ ಚಾಟಿಂಗ್ ನಡೆದಿರುವುನ್ನು ನೋಡಿದ್ದ. ನವೀನ್ ಮೊಬೈಲ್‌ನಲ್ಲಿದ್ದ ಶಿಲ್ಪಾಳ ನಂಬರ್ ತೆಗೆದುಕೊಂಡು ಅವಳಿಗೆ ಕರೆ ಮಾಡಿ, ನವೀನ್ ನಿನಗೆ ದುಡ್ಡು ಕಳಿಸಿದ್ದಾನೆ, ನಿಮಗೆ ದುಡ್ಡು ಎಲ್ಲಿಂದ ಬಂತು? ನಮ್ಮ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿ ನವೀನ್ ನಿನಗೆ ಹಣ ಕಳಿಸಿದ್ದಾನೆ. ಇದನ್ನು ಬಹಿರಂಗ ಮಾಡುತ್ತೇನೆ. ನಿಮ್ಮ ತಂದೆ ತಾಯಿಗೂ ಹೇಳುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತು ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸ್ನೇಹಿತ ನವೀನ್ ಆರೋಪಿಸಿದ್ದಾನೆ.ಶಿಲ್ಪಾ ನಿವಾಸಕ್ಕೆ ಮುತಾಲಿಕ್ ಭೇಟಿ: ಆತ್ಮಹತ್ಯೆ ಮಾಡಿಕೊಂಡಿದ್ದ ಶಿಲ್ಪಾ ನಿವಾಸಕ್ಕೆ ಶನಿವಾರ ಪ್ರಮೋದ ಮುತಾಲಿಕ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಫರ್ನಿಚರ್ ಅಂಗಡಿ ಮಾಲೀಕ ರಂಜಾನ್ ನದಾಫನನ್ನು ಬಂಧಿಸುವಂತೆ ಅವರು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಮುತಾಲಿಕ್, ಶಿಲ್ಪಾ ಹಾಗೂ ನವೀನ್ ಪ್ರೀತಿಸುತ್ತಿದ್ದರು. ನವೀನ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ನವೀನ್ ಮನೆಯಲ್ಲಿ ಬಹಳ ಬಡತನ ಇತ್ತು. ಅವರ ತಾಯಿಗೆ ಔಷಧ ಕೊಡಿಸಬೇಕಿತ್ತು. ನವೀನಗೆ ರಂಜಾನ್ ನದಾಫ್ ಸಂಬಳ ಕೊಟ್ಟಿರಲಿಲ್ಲ. ಹೀಗಾಗಿ ಅಂಗಡಿಯಲ್ಲಿ ಸ್ವಲ್ಪ ವಸ್ತು ಕಳ್ಳತನ ಮಾಡಿ ತಾಯಿಗೆ ಔಷಧ ಕೊಡಿಸಿದ್ದಾನೆ. ಅದಕ್ಕಾಗಿಯೇ ನವೀನನಿಗೆ ಹೊಡೆದು-ಬಡಿದು ರಂಜಾನ್ ಪೊಲೀಸ್ ಕಂಪ್ಲೇಂಟ್ ಮಾಡಿದ್ದಾನೆ. ನವೀನ್ ಮೊಬೈಲ್ ಕಸಿದುಕೊಂಡು ಅದರಲ್ಲಿ ಶಿಲ್ಪಾ ನಂಬರ್ ತಗೊಂಡು ಟಾರ್ಚರ್ ಮಾಡಿದ್ದಾನೆ. ಇದರಿಂದ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಂಜಾನ್ ನದಾಫ್‌ನನ್ನು ಒದ್ದು ಒಳಗೆ ಹಾಕಿ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಶಿಲ್ಪಾ ಸಾವಿಗೆ ಕಾರಣವಾದ ವ್ಯಕ್ತಿ ಬಂಧಿಸಿ: ಬಸವರಾಜ ಬೊಮ್ಮಾಯಿಶಿಗ್ಗಾಂವಿ ತಾಲೂಕಿನ ಚಿಕ್ಕ ಮಲ್ಲೂರು ಗ್ರಾಮದ ದಲಿತ ಯುವತಿ ಶಿಲ್ಪಾಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣವಾಗಿರುವ ಅನ್ಯಕೋಮಿನ ವ್ಯಕ್ತಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಶಿಲ್ಪಾ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಹಿಂದೆ ಅನ್ಯಕೋಮಿನ ವ್ಯಕ್ತಿಯ ಕಿರುಕುಳವೇ ಕಾರಣ ಎನ್ನುವ ಸತ್ಯ ಹೊರಬಂದಿದೆ.ಉನ್ನತ ಶಿಕ್ಷಣ ಪಡೆದು ಬದುಕಿ ಬಾಳಬೇಕಾಗಿದ್ದ ವಿದ್ಯಾರ್ಥಿನಿ ತನಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಅನ್ಯ ಕೋಮಿನ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಜೀವಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿಲ್ಪಾಳ ಆತ್ಮಹತ್ಯೆಯ ಹಿಂದಿನ ಸತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಮುಚ್ಚಿಹಾಕುವ ಅಥವಾ ಪ್ರಕರಣದ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಯುವತಿಗೆ ಕಿರುಕುಳ ಕೊಟ್ಟು ಅವಳ ಸಾವಿಗೆ ಕಾರಣವಾಗಿರುವ ವ್ಯಕ್ತಿಯನ್ನು ಪೊಲೀಸರು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು. ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿರುವ ಯುವತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.