ವಿದ್ಯಾರ್ಥಿನಿಗೆ ಸಿಗದ ಸವಲತ್ತು: ನೊಂದು ಸಿಎಂಗೆ ಪತ್ರ

| Published : Aug 04 2025, 12:15 AM IST

ಸಾರಾಂಶ

ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳು ಕಣ್ಮುಚ್ಚುತ್ತಿರುವ ಈ ತರುಣದಲ್ಲಿ ಗಡಿನಾಡಿನಲ್ಲಿ ಐಸಿಯು ತಲುಪಿರುವ ಕನ್ನಡ ಶಾಲೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳು ಕಣ್ಮುಚ್ಚುತ್ತಿರುವ ಈ ತರುಣದಲ್ಲಿ ಗಡಿನಾಡಿನಲ್ಲಿ ಐಸಿಯು ತಲುಪಿರುವ ಕನ್ನಡ ಶಾಲೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ.

ದಶಕಗಳು ಉರುಳುತ್ತಿದ್ದರೂ, ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ದುಸ್ಥಿತಿ, ಅಲ್ಲಿ ಕನ್ನಡ ಓದಿದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಉಂಟಾಗುತ್ತಿರುವ ಅಡ್ಡಿ-ಆತಂಕಗಳು ದಿನೇ ದಿನೇ ಹೆಚ್ಚಾಗುತ್ತಿವೆ, ಹೀಗೆ ಜ್ವಾಲೆಯಂತೆ ಸುಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಹಲವು ವರ್ಷಗಳಿಂದ ಪರಿಹಾರಗಳು ಸಿಗದೇ ಇರುವುದಕ್ಕೆ ಗಡಿಯಲ್ಲಿನ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುವಂತೆ ಮಾಡಿದೆ. ಇದಕ್ಕೆ ತಾಜಾ ಉದಾಹಾರಣೆ ಎಂದರೆ ಆಂಧ್ರದಲ್ಲಿ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ರಜೀಯಾ ಬೇಗಂ ತನ್ನ ಮುಂದಿನ ಅಭ್ಯಾಸಕ್ಕಾಗಿ ಕರ್ನಾಟಕ ರಾಜ್ಯದ ಚಿತ್ರದುರ್ಗಕ್ಕೆ ಆಗಮಿಸಿ ಪಿಯುಸಿ ಸೇರ್ಪಡೆಗೊಂಡು ಇದೀಗ ಅಲ್ಲಿ ವಸತಿ ನಿಲಯ ಸಿಗದೇ ತೀವ್ರ ಸಮಸ್ಯೆಗೆ ಗುರಿಯಾಗಿದ್ದು, ಇದರಿಂದ ನೊಂದ ವಿದ್ಯಾರ್ಥಿನಿ ರಜೀಯಾ ಬೇಗಂ ನನಗೆ ಹಾಸ್ಟಲ್‌ ಸೌಲಭ್ಯ ಕಲ್ಪಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾಳೆ.

ಯಾಕೆ ಪತ್ರ ಏನು ಸಮಸ್ಯೆ ? : ರಾಯಚೂರು ಜಿಲ್ಲೆಯ ಪಕ್ಕದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ತಾಲೂಕಿನ ಬದಿನೇಹಾಳ ಗ್ರಾಮದ ರಜೀಯಾ ಬೇಗಂ ತಾನು ಹುಟ್ಟಿದ ಗ್ರಾಮದಲ್ಲಿರುವ ಗಡಿನಾಡು ಕನ್ನಡ ಶಾಲೆಯಲ್ಲಿ 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ತೇರ್ಗಡೆಯಾಗಿದ್ದು, ಮುಂದಿನ ಹಂತದ ಶಿಕ್ಷಣಕ್ಕಾಗಿ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ವಿಶ್ವಮಾನವ ಸಂಯುಕ್ತ ಪದವಿ ಪೂರ್ವ ಶಿಕ್ಷಣ ಪಡೆದು ಪದವಿಗಾಗಿ ಅಲ್ಲಿಯೇ ಇರುವ ಸರ್ಕಾರಿ ವಿಜ್ಞಾನ ಕಾಲೇಜನ್ನು ಸೇರಿದ್ದಾಳೆ. ವಸತಿಗಾಗಿ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಾಂತ್ರಿಕ ಸಮಸ್ಯೆಯಿಂದ ಅದು ಸ್ವೀಕಾರಗೊಂಡಿಲ್ಲ. ಈ ವಿದ್ಯಾರ್ಥಿನಿ ಆಂಧ್ರಕ್ಕೆ ಸೇರಿದವಳಾಗಿದ್ದರಿಂದ ಅಲ್ಲಿಯ ಆದಾಯ-ಜಾತಿ ಪ್ರಮಾಣ ಪತ್ರಗಳು ರಾಜ್ಯದಲ್ಲಿ ಪರಿಗಣಿಸಲು ಸಾಧ್ಯವಾಗದ ಕಾರಣಕ್ಕೆ ವಸತಿ ನಿಲಯ ಸಿಗದೇ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾಳೆ. ರಜೀಯಾ ಬೇಗಂ ಅವರ ತಂದೆ-ತಾಯಿ ಅಲೆಮಾರಿಗಳಾಗಿರುವ ಕಾರಣಕ್ಕೆ ಬೆಂಗಳೂರಿನಲ್ಲಿ ದುಡಿಯುತ್ತಿದ್ದು, ಚಿತ್ರದುರ್ಗದಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ಪ್ರವೇಶ ಪಡೆದಿರುವ ಈ ಬಡ ವಿದ್ಯಾರ್ಥಿನಿ, ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಕನ್ನಡದಲ್ಲಿ ಓದಿದ ಪಾಪಕ್ಕೆ ಇಂದು ಕರ್ನಾಟಕ ನೆಲದಲ್ಲಿ ಸವಲತ್ತಿನಿಂದ ವಂಚಿತಗೊಂಡಿದ್ದಾಳೆ.

ಹೀಗೆ ವಿಚಿತ್ರ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿನಿ ರಜೀಯಾ ಬೇಗಂ ಏನು ಮಾಡಬೇಕು ಎಂದು ತೋಚದೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ಬರೆದು, ತನ್ನ ಸಮಸ್ಯೆಯನ್ನು ತಿಳಿಸಿದ್ದಾಳೆ ಇಷ್ಟೇ ಅಲ್ಲದೇ ವಸತಿಯಿಂದ ವಂಚಿತಗೊಂಡಿದ್ದು, ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿ ರೇಜಿಯಾ ಬೇಗಂ ಸಿಎಂಗೆ ಮಾಡಿರುವ ಮನವಿಯ ವಿಡಿಯೋ ಎಲ್ಲೆಡೆ ವೈರಲ್‌ಗೊಂಡಿದೆ.

ರಾಯಚೂರು ಪಕ್ಕದ ತೆಲಂಗಾಣ ರಾಜ್ಯದ ನಾರಾಯಣಪೇಟೆ, ಹೈದರಾಬಾದ್, ಮೆದಕ್ ಹಾಗೂ ಆಂಧ್ರಪ್ರದೇಶ ರಾಜ್ಯದ ಕರ್ನೂಲ್, ಅನಂತಪುರ ಈ ಐದು ಜಿಲ್ಲೆಗಳಲ್ಲಿ ಸುಮಾರು 20 ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ಮುಂದೆ ಕರ್ನಾಟಕದಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಬರುವ ಮಕ್ಕಳಿಗೆ ರಾಜ್ಯದಲ್ಲಿ ವಿವಿಧ ಕೋರ್ಸ್, ಸವಲತ್ತು ಹಾಗೂ ಗಡಿನಾಡು ಕೋಠಾದಡಿ ಪ್ರವೇಶ ಸಿಗುತ್ತಿಲ್ಲ.

----------------

ಇಂದು ಬಾಲಕಿ ರಜೀಯಾ ಬೇಗಂ ಅನುಭವಿಸುತ್ತಿರುವ ಸಮಸ್ಯೆಯಂತಹ ಹಲವಾರು ತೊಂದರೆಗಳನ್ನು ಗಡಿನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಈ ತಾಂತ್ರಿಕ ಸಮಸ್ಯೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಗಡಿನಾಡು ಪ್ರಾಂತ್ಯದಲ್ಲಿ ಮುಚ್ಚಿ ಹೋಗುತ್ತಿರುವ ಕನ್ನಡ ಶಾಲೆಗಳನ್ನು, ಕನ್ನಡವನ್ನು ಉಳಿಸಿ-ಬೆಳೆಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಪ್ರಾರ್ಥಿಸಲಾಗುವುದು.-ಅಮರ ದೀಕ್ಷಿತ್‌ ಕೃಷ್ಣ, ಉಪಾಧ್ಯಕ್ಷ, ಗಡಿನಾಡು ಕನ್ನಡ ಸಂಘ, ಕೃಷ್ಣ ಗ್ರಾಮ, ನಾರಾಯಣಪೇಟೆ ಜಿಲ್ಲಾ, ತೆಲಂಗಾಣ