ಸಾರಾಂಶ
- ಮಂಗಳವಾರ ಬೆಳಗ್ಗೆ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ್ದ ಮೇಘಶ್ರೀ- ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರು । ಮೆಗ್ಗಾನ್‌ನಲ್ಲಿ ಮರಣೋತ್ತರ ಪರೀಕ್ಷೆ- ವಿದ್ಯಾರ್ಥಿನಿ ಸಾವಿನ ಕುರಿತು ಸ್ಪಷ್ಟನೆ ನೀಡುವಂತೆ ಪೋಷಕರು, ಸಂಘಟನೆಗಳ ಆಗ್ರಹ
- - - ಕನ್ನಡಪ್ರಭ ವಾರ್ತೆ ಶಿವಮೊಗ್ಗನಗರದ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು 3ನೇ ಅಂತಸ್ಥಿನಿಂದ ಹಾರಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೃತಳ ಪೋಷಕರು, ಸಂಬಂಧಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಆಡಳಿತ ಮಂಡಳಿ ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಲೇಜು ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿನಿ ಮೇಘಶ್ರೀ (17) ಮೃತಪಟ್ಟವಳು. ಮಂಗಳವಾರ ಬೆಳಗ್ಗೆ ಪರೀಕ್ಷೆ ಬರೆಯಲು ಮೇಘಶ್ರೀ ಕಾಲೇಜಿಗೆ ಆಗಮಿಸಿದ್ದಳು. ಈ ಸಂದರ್ಭ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆ ಹೊತ್ತಿಗಾಗಲೇ ಮೇಘಶ್ರೀ ಕೊನೆಯುಸಿರೆಳೆದಿದ್ದಳು. ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಮೇಘಶ್ರೀ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ವಿದ್ಯಾರ್ಥಿನಿ ಮೇಘಶ್ರೀ ಸಾವಿನ ವಿಷಯ ತಿಳಿದ ಪೋಷಕರು, ಸಂಬಂಧಿಗಳು, ವಿವಿಧ ಸಂಘಟನೆಗಳ ಪ್ರಮುಖರು ಕಾಲೇಜಿಗೆ ದೌಡಾಯಿಸಿದ್ದರು. ಆದರೆ, ಕಾಲೇಜು ಆವರಣದೊಳಗೆ ಯಾರೂ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಹಾಗಾಗಿ, ವಿದ್ಯಾರ್ಥಿನಿ ಕುಟುಂಬದವರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಬಳಿಕ ಕಾಲೇಜು ಆವರಣ ಪ್ರವೇಶಿಸಿದ ಕುಟುಂಬದವರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಆಡಳಿತ ಮಂಡಳಿ ಕಚೇರಿಗೆ ತೆರಳಿ ವಿದ್ಯಾರ್ಥಿನಿ ಸಾವಿನ ಕುರಿತು ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಕೆಲವರು ಕಾಲೇಜಿನಲ್ಲಿದ್ದ ಬ್ಯಾನರ್ ಹರಿದು ಹಾಕಿದರು.ಕೊನೆಗೆ ಪೊಲೀಸರು ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದರು. ಆದರೆ, ಆಡಳಿತ ಮಂಡಳಿಯವರು ಸ್ಪಷ್ಟನೆ ನೀಡುವವರೆಗೆ ಕಾಲೇಜು ಆವರಣದಲ್ಲಿ ಧರಣಿ ಮುಂದುವರಿಸಿದರು. ಘಟನೆ ಹಿನ್ನೆಲೆ ಕಾಲೇಜು ಆವರಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕಾಲೇಜಿಗೆ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎಸ್‌ಪಿ ಬಳಿ ಅಳಲು ತೋಡಿಕೊಂಡ ಪೋಷಕರು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಒಂದು ಜೀವ ಕಳೆದಿದೆ. ಈ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕಾಲೇಜಿಗೆ ಆಗಮಿಸಿದ್ದ ಮೇಘಶ್ರೀ ಕೆಲ ಹೊತ್ತಿನ ಬಳಿಕ ವಾಶ್ ರೂಂಗೆ ಹೋಗಿ ಬರುವುದಾಗಿ ತೆರಳಿದ್ದಾಳೆ. ಆಕೆ ಜೊತೆ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿತ್ತು. ಈ ಸಂದರ್ಭ ಘಟನೆ ಸಂಭವಿಸಿದ್ದು, ಈ ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- - - ಕೋಟ್ವಿದ್ಯಾರ್ಥಿನಿ ಮೇಘಶ್ರೀ ಆದಿಚುಂಚನಗಿರಿ ಪಿಯು ಕಾಲೇಜಿನ 5ನೇ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರೀಕ್ಷೆ ಬರೆಯಲು ಆಗಮಿಸಿದ್ದ ಮೇಘಶ್ರೀ ಹೊಟ್ಟೆ ನೋವು ಕಾರಣ ನೀಡಿ ಕಂಪ್ಯೂಟರ್ ಕೊಠಡಿಯಲ್ಲಿದ್ದರು. ಸಿಬ್ಬಂದಿ ಆಚೆ ಹೋದಾಗ ಐದನೇ ಮಹಡಿಗೆ ತೆರೆಳಿ, ಕಟ್ಟಡದಿಂದ ಹಾರಿ ಮೃತಪಟ್ಟಿದ್ದಾರೆ. ಪ್ರಕರಣ ಬಗ್ಗೆ ಎಲ್ಲ ಆಯಾಮಾಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಸಂಪೂರ್ಣ ತನಿಖೆ ಬಳಿಕ ಸತ್ಯ ಹೊರತರಲಿದ್ದೇವೆ- ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಎಸ್‌ಪಿ
- - --5ಎಸ್‌ಎಂಜಿಕೆಪಿ05:ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ವಿದ್ಯಾರ್ಥಿನಿಗೆ ಮೇಘಶ್ರೀ ಸಾವನ್ನಪ್ಪಿದ ಹಿನ್ನೆಲೆ ಕಾಲೇಜಿಗೆ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.