ವಿದ್ಯಾರ್ಥಿ ದಿಗಂತ್‌ ನಾಪತ್ತೆ ಪ್ರಕರಣ: ತನಿಖೆ ಹಾದಿಯಲ್ಲಿ ಹಲವು ಅನುಮಾನ

| Published : Mar 12 2025, 12:52 AM IST

ಸಾರಾಂಶ

ವಿದ್ಯಾರ್ಥಿ ದಿಗಂತ್ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಪ್ರಕರಣ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ದಿಗಂತ್‌ ಪತ್ತೆಯಾದರೂ ಕೂಡ ಪ್ರಕರಣ ಸುಖಾಂತ್ಯ ಕಂಡಿಲ್ಲ, ದಿಂಗತ್‌ ಪೂರ್ವನಿಯೋಜಿತವಾಗಿಯೇ ಮನೆ ಬಿಟ್ಟ ಕುರಿತು ತಿಳಿದುಬಂದಿರುವುದು ಗೊಂದಲಗಳನ್ನು ಹುಟ್ಟು ಹಾಕಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಫರಂಗಿಪೇಟೆ ಕಿದೆಬೆಟ್ಟು ‌ನಿವಾಸಿ ವಿದ್ಯಾರ್ಥಿ ದಿಗಂತ್ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಪ್ರಕರಣ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ದಿಗಂತ್‌ ಪತ್ತೆಯಾದರೂ ಕೂಡ ಪ್ರಕರಣ ಸುಖಾಂತ್ಯ ಕಂಡಿಲ್ಲ, ದಿಂಗತ್‌ ಪೂರ್ವನಿಯೋಜಿತವಾಗಿಯೇ ಮನೆ ಬಿಟ್ಟ ಕುರಿತು ತಿಳಿದುಬಂದಿರುವುದು ಗೊಂದಲಗಳನ್ನು ಹುಟ್ಟು ಹಾಕಿದೆ.

ಮನೆಗೆ ಮರಳಲು ನಕಾರ:

ದಿಗಂತ್ ಉಡುಪಿಯಲ್ಲಿ ಪತ್ತೆಯಾದ ಕೂಡಲೇ ಪೋಲೀಸರ ಆತನನ್ನು ವಶಕ್ಕೆ ಪಡೆದುಕೊಂಡು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಮಂಗಳೂರಿಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಿದ ಪೋಲೀಸರಿಗೆ ಆತ ಯಾವ ಕಾರಣಕ್ಕೆ ಮನೆ ಬಿಟ್ಟು ತೆರಳಿರುವುದು ಎಂಬುದರ ಬಗ್ಗೆ ವಿಚಾರ ತಿಳಿಸಿದ್ದು, ಮಹತ್ವದ ಹೇಳಿಕೆ ಕೂಡ ನೀಡಿದ್ದಾನೆ.

ತಾನು ವಾಪಸು ಮನೆಗೆ ಹೋಗುವುದಿಲ್ಲ ಎಂಬ ಮಾತನ್ನು ಪೋಲೀಸರಲ್ಲಿ ಹೇಳಿಕೊಂಡಿದ್ದಾನೆ. ಆದರೆ ಯಾವ ಕಾರಣಕ್ಕಾಗಿ ವಾಪಸು ಮನೆಗೆ ಹೋಗುವುದಿಲ್ಲ ಎಂಬುದನ್ನು ಪೋಲೀಸರು ಸ್ಪಷ್ಟಪಡಿಸಿಲ್ಲ. ಇದೇ ಮಾತನ್ನು ಆತನ ಪೋಷಕರ ಬಳಿಯೂ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈತನ ಈ ಹೇಳಿಕೆ ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ.

ಫೆ. 25 ರಂದು ಕಾಣೆಯಾಗಿದ್ದ ದಿಗಂತ್‌, ಸತತ 12 ದಿನಗಳ ಕಾಲ ಊರೂರು ಸುತ್ತಿ ಉಡುಪಿಯಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಮನೆಗೆ ತೆರಳುವುದಿಲ್ಲ ಎಂಬ ಮಾತಿನ ಮರ್ಮವೇನು? ಎಂಬುದು ನಿಗೂಢವಾಗಿ ಉಳಿದಿದೆ. ಮನೆ ಬಿಟ್ಟು ತೆರಳುವುದು ಪೂರ್ವನಿಯೋಜಿತ ಎಂಬಂತೆ, ದಿಗಂತ್ ಮನೆಯಿಂದ ಹೊರಟು ಹೋಗುವಾಗ ಆತನ ಜೊತೆ ಬಟ್ಟೆ ಹಾಗೂ ಶೂಗಳನ್ನು ಆತ ತೆಗೆದುಕೊಂಡು ಹೋಗಿದ್ದ ಎಂಬ ಮಹತ್ವದ ವಿಚಾರವನ್ನು ಪೋಲೀಸರು ದೃಢಪಡಿಸಿದ್ದಾರೆ. ಆತನ ಬಳಿಯಲ್ಲಿ ಇದ್ದ ಬಟ್ಟೆ ಹಾಗೂ ಶೂಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ದಿಗಂತ್‌ ಬೋಂದೆಲ್‌ನ ಬಾಲಕರ ಮಂದಿರದಲ್ಲಿದ್ದಾನೆ.

ತನಿಖೆಗೆ ಅಸಹಕಾರ?:

ದಿಗಂತ್ ನಾಪತ್ತೆಯಾದ ಬಳಿಕ ಈತನ ಪತ್ತೆಗಾಗಿ ಪೋಲೀಸ್ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿತು. ಆದರೆ ಯಾವುದೇ ಸುಳಿವು ಇವರಿಗೆ ಸಿಕ್ಕಿರಲಿಲ್ಲ. ಈತನ ಪತ್ತೆಯ ಸಹಕಾರದ ದೃಷ್ಟಿಯಿಂದ ಪೋಲೀಸರ ತಂಡ ಪೋಷಕರನ್ನು ತನಿಖೆ ನಡೆಸುವ ವೇಳೆ ಸರಿಯಾದ ಸಹಕಾರ ನೀಡುತ್ತಿರಲಲ್ಲ. ಹಾಗಾಗಿಯೇ ಪ್ರಕರಣ ಜಟಿಲವಾಗಿ, ಯಾವುದೇ ಸ್ಪಷ್ಟವಾದ ಸುಳಿವು ಸಿಗಲು ಸಾಧ್ಯವಾಗಿರಲಿಲ್ಲ. ಈತ ಮನೆಯಿಂದ ಹೊರಟ ಸಮಯವನ್ನು ಕೂಡ ಸರಿಯಾದ ರೀತಿಯಲ್ಲಿ ಪೋಲೀಸರ ಬಳಿ ತಿಳಿಸಿಲ್ಲ ಎಂದು ಹೇಳಲಾಗಿದೆ.

ದಿಗಂತ್ ಮೂರು ಮೊಬೈಲ್ ಗಳ್ನು ಬಳಕೆ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದಿದ್ದು, ಆರಂಭದಲ್ಲಿ ಮನೆಯವರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು, ಬಳಿಕ ಈತ ಬಳಕೆ ಮಾಡುತ್ತಿದ್ದ ಮೊಬೈಲ್ ಬಗ್ಗೆ ಒಪ್ಪಿಕೊಂಡಿದ್ದರು. ಇದೀಗ ಆತ ಮನೆಯಿಂದ ಹೋಗುವಾಗ ಬಟ್ಟೆ ಹಾಗೂ ಶೂ ತೆಗೆದುಕೊಂಡು ಹೋಗಿರುವ ವಿಚಾರ ಪೋಲೀಸರಿಗೆ ತನಿಖೆಯ ವೇಳೆ ಗೊತ್ತಾಗಿದ್ದು, ಈ ವಿಚಾರವನ್ನು ಕೂಡ ಮನೆಯವರು ಮುಚ್ಚಿಟ್ಟಿದ್ದರು ಎಂದು ‌ಪೋಲೀಸ್ ಮೂಲಗಳು ತಿಳಿಸಿವೆ.

ಮಾಹಿತಿಯಲ್ಲಿ ವೈರುಧ್ಯ:

ನಾಪತ್ತೆಯಾದ ಆದ ಸಂದರ್ಭದಲ್ಲಿ ಆತ ಬಿಳಿ ಟೀ ಶರ್ಟ್ ಹಾಕಿಕೊಂಡು ತೆರಳಿದ್ದ ಬಗ್ಗೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಬಿಳಿ ಟೀ ಶರ್ಟ್ ಹಾಕಿಕೊಂಡು ಹೋಗಿಲ್ಲ ಎಂಬುದರ ಬಗ್ಗೆ ಪೋಲೀಸರ ತನಿಖೆಯ ವೇಳೆ ಕಂಡು ಬಂದಿದೆ. ಈತ ಉಡುಪಿ ಡೀ ಮಾರ್ಟ್ ಮಳಿಗೆಯಲ್ಲಿ ಚಾಕು ಪಡೆದುಕೊಂಡಿರುವ ಬಗ್ಗೆ ಪೋಲೀಸರು ತಿಳಿಸಿದ್ದಾರೆ. ಮನೆಯವರಲ್ಲಿ ಪೋಲೀಸರು ಆತನ ಬಟ್ಟೆಬರೆಗಳ ಬಗ್ಗೆ ಕೇಳಿದಾಗ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.

ಇಂದು ಹೈಕೋರ್ಟ್‌ ಗೆ ಹಾಜರು:

ದಿಗಂತ್‌ ಮನೆಮಂದಿ ಹೇಬಿಯಸ್‌ ಕಾರ್ಪಸ್‌ ಅಜ್ಜಿ ಹಾಕಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮಾ.೧೨ ರಂದು ಹೈಕೋರ್ಟ್‌ ಗೆ ಹಾಜರು ಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಹೈಕೋರ್ಟ್‌ ನಲ್ಲಿ ದಿಗಂತ್‌ ನೀಡಬಹುದಾದ ಹೇಳಿಕೆಗಳು ಒಟ್ಟು ಪ್ರಕರಣದ ಮುಂದಿನ ಹಾದಿಗೆ ದಿಕ್ಸೂಚಿಯಾಗಲಿದೆ.