ಕಾಪು: ಇಲ್ಲಿನ ಖಾಸಗಿ ಬಸ್‌ನ ಫೂಟ್ ಬೋರ್ಡಿನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಸಂಚರಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳ‍ದ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಕಾಪುವಿನಿಂದ ಉಡುಪಿಗೆ ಸಂಚರಿಸುವ ಬಸ್ಸೊಂದರ ಹಿಂಬಾಲಿನಲ್ಲಿ ವಿದ್ಯಾರ್ಥಿಯೊಬ್ಬ ನೇತಾಡುತಿದ್ದು, ಬಸ್‌ನ ಹಿಂಬದಿಯ ವಾಹನದಲ್ಲಿದ್ದವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ, ಖಾಸಗಿ ಬಸ್‌ಗಳು ತಮ್ಮ ಹಣದಾಸೆಗೆ, ಕಾನೂನಿನ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿ, ಜನರ ಜೀವದ ಜೊತೆ ಚೆಲ್ಲಾಟವಾಡುತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದೀಗ ಈ ವಿಡಿಯೋ ಉಡುಪಿ ಸುದ್ದಿ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಬಸ್‌ ಮಾಲೀಕರ ಮೇಲೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಈ ಮಾರ್ಗದಲ್ಲಿ ಸಾಕಷ್ಟು ಬಸ್‌ಗಳಿದ್ದರೂ ಈ ವಿದ್ಯಾರ್ಥಿ ಕೇವಲ ಹುಚ್ಚಾಟಕ್ಕಾಗಿ ಈ ರೀತಿ ಬಸ್‌ನ ಬಾಗಿಲಿನಲ್ಲಿ ನೇತಾಡುತಿದ್ದಾನೆ. ಆತನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ತಡೆಯದ ಬಸ್‌ ನಿರ್ವಾಹಕರನ್ನೂ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ಉಡುಪಿ ಜಿಲ್ಲಾಧಿಕಾರಿ ಅವರು ಎಲ್ಲ ಖಾಸಗಿ ಬಸ್‌ಗಳಲ್ಲಿ ಬಾಗಿಲುಗಳನ್ನು ಕಡ್ಡಾಯವಾಗಿ ಅಳ‍ವಡಿಸಬೇಕು ಎಂದು ಆದೇಶಿಸಿದ್ದರೂ ಬಸ್‌ ಮಾಲೀಕರ ಅದಕ್ಕೆ ಕ್ಯಾರೇ ಎನ್ನದ ಬಗ್ಗೆ ಮತ್ತು ಅಂತಹ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.