ಸಾರಾಂಶ
ಕುಂದಾಪುರ ತಾಲೂಕಿನ ಪ್ರಸಿದ್ಧ ದೈವಸ್ಥಾನಗಳಲ್ಲಿ ಒಂದಾದ ಹೊಳ್ಮಗೆ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯೊಳಗೆ ವಿದ್ಯಾರ್ಥಿಯು ತನ್ನನ್ನು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾಡುವಂತೆ ಮಾಡಿರುವ ಮನವಿ ಪಟ್ಟಿ ಸಿಕ್ಕಿದ್ದು, ಮನವಿ ಪತ್ರದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಪರೀಕ್ಷೆಯಲ್ಲಿ ನನಗೆ ಇಂತಿಷ್ಟೇ ಅಂಕಗಳು ಬೇಕು ಎಂದು ಬೇಡಿಕೆ ಇರಿಸಿರುವ ವಿದ್ಯಾರ್ಥಿಯೊಬ್ಬ ತನ್ನ ಬೇಡಿಕೆ ಪಟ್ಟಿಯನ್ನು ಬರೆದು ದೈವದ ಕಾಣಿಕೆ ಡಬ್ಬಿಗೆ ಹಾಕಿರುವ ಬೆಳವಣಿಗೆ ತಾಲೂಕಿನ ಹಕ್ಲಾಡಿ ಸಮೀಪದ ಹೊಳ್ಮಗೆ ಎಂಬಲ್ಲಿ ನಡೆದಿದೆ.ತಾಲೂಕಿನ ಪ್ರಸಿದ್ಧ ದೈವಸ್ಥಾನಗಳಲ್ಲಿ ಒಂದಾದ ಹೊಳ್ಮಗೆ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯೊಳಗೆ ವಿದ್ಯಾರ್ಥಿಯ ಮನವಿ ಪಟ್ಟಿ ಸಿಕ್ಕಿದ್ದು, ಮನವಿ ಪತ್ರದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೊಳ್ಮಗೆ ಬೊಬ್ಬರ್ಯ ದೈವಸ್ಥಾನಕ್ಕೆ ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಮಾತ್ರವಲ್ಲದೆ ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿಯೂ ಈ ದೇವರನ್ನು ನಂಬಿರುವ ದೊಡ್ಡ ಭಕ್ತ ವರ್ಗ ಇದೆ. ಮಾ.14 ರಂದು ಈ ದೈವಸ್ಥಾನದ ವಾರ್ಷಿಕ ಹಾಲು ಹಬ್ಬ ಹಾಗೂ ಕೆಂಡಸೇವೆ ನಡೆದಿದ್ದು, ಇದಾದ ವಾರಗಳ ಬಳಿಕ ದೈವಸ್ಥಾನದ ಆಡಳಿತ ಮಂಡಳಿ, ಊರವರು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ದೇವರ ಕಾಣಿಕೆ ಡಬ್ಬಿ ತೆರೆದಿದ್ದಾರೆ. ಈ ವೇಳೆ ಭಕ್ತರು ಹಾಕಿರುವ ಕಾಣಿಕೆ ಹಣದ ಜೊತೆ ವಿದ್ಯಾರ್ಥಿ ವಿಚಿತ್ರ ಬೇಡಿಕೆ ಇರುವ ಪಟ್ಟಿ ದೊರಕಿದೆ.ಬೇಡಿಕೆ ಪಟ್ಟಿ ಬರೆದಿರುವ ಅಪರಿಚಿತ ವಿದ್ಯಾರ್ಥಿ ಕನಿಷ್ಠ ಬೇಡಿಕೆ ಈಡೇರಿಸಲು ಕೋರಿಕೊಂಡಿದ್ದಾನೆ. ‘ಜಸ್ಟ್ ಪಾಸ್’ ಮಾಡುವಂತೆ ಮನವಿ ಮಾಡಿರುವ ವಿದ್ಯಾರ್ಥಿ ಗಣಿತದಲ್ಲಿ 36-39, ಇಂಗ್ಲೀಷ್‌ನಲ್ಲಿ 37-39, ಕನ್ನಡದಲ್ಲಿ 39-40, ವಿಜ್ಞಾನದಲ್ಲಿ 38-39, ಹಿಂದಿಯಲ್ಲಿ 39-40 ಹಾಗೂ ಸಮಾಜದಲ್ಲಿ 37-38 ಅಂಕಗಳಿಗೆ ಮನವಿ ಮಾಡಿದ್ದಾನೆ.
ವಿದ್ಯಾರ್ಥಿ ಪತ್ರದ ಮೇಲ್ಭಾಗದಲ್ಲಿ ಪರೀಕ್ಷೆಯಲ್ಲಿ ‘ನನಗೆ ಇಷ್ಟು ಮಾರ್ಕ್ ಇರಬೇಕು ದೇವರೇ ಹೊರ್ ಬೊಬ್ಬರ್ಯ’ ಎಂದು ಹಾಗೂ ಕೆಳ ಭಾಗದಲ್ಲಿ ಮತ್ತೆ ‘ದೇವರೇ ಇದಕ್ಕಿಂತಲೂ ನನಗೆ ಕಡಿಮೆ ಬೇಡ ದೇವರೆ ಹೋರ್ ಬೊಬ್ಬರ್ಯ’ ಎಂದು ಬರೆದುಕೊಂಡಿದ್ದಾರೆ.ವಿಳಾಸವಿಲ್ಲದ ಪತ್ರ ಬರೆದಿರುವುದು ವಿದ್ಯಾರ್ಥಿಯೋ ಇಲ್ಲ ವಿದ್ಯಾರ್ಥಿನಿಯೋ ಎನ್ನುವ ಗೊಂದಲಗಳಿವೆ. ಯಾವ ತರಗತಿ ಎಂದು ಬರೆದುಕೊಳ್ಳದೆ ಇದ್ದರೂ, ಸದ್ಯ ನಡೆಯುತ್ತಿರುವ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿರುವವರ ಮನವಿ ಇದು ಎನ್ನುವ ಶಂಕೆ ಇದೆ.
ಸದ್ಯ ಕಾಣಿಕೆ ಹುಂಡಿಯಲ್ಲಿ ದೊರೆತಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿರುವುದರಿಂದ ಅದರಲ್ಲಿನ ಹಸ್ತಾಕ್ಷರದಿಂದ ಕಲಿಸಿದ ಶಿಕ್ಷಕರು ಪತ್ರ ಬರೆದಿರುವವರ ಗುರುತು ಪತ್ತೆ ಹಚ್ಚಿದರೂ ಆಶ್ಚರ್ಯವಿಲ್ಲ.