ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟ: ಅರುಣಕುಮಾರ

| Published : Feb 08 2025, 12:33 AM IST

ಸಾರಾಂಶ

ವ್ಯಕ್ತಿಗೆ ಸಂಸ್ಕಾರ ತುಂಬಾ ಮುಖ್ಯ. ಶಿಕ್ಷಣದಿಂದ, ಓದಿನಿಂದ ಒಳ್ಳೆಯವರ ಒಡನಾಟದಿಂದ ಸಿಗುತ್ತದೆ.

ಅಂಕೋಲಾ: ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟವಾಗಿದೆ. ಈ ಹೊತ್ತಿನಲ್ಲಿ ಸಾಧನೆಯ ಕಡೆಗೆ ಗುರಿಯಿಟ್ಟು ತನ್ಮಯತೆಯಿಂದ ಓದಬೇಕು. ಬದುಕನ್ನು ಅರ್ಥ ಮಾಡಿಕೊಳ್ಳಲು ಶಿಕ್ಷಣ ಬೇಕೆಂದು ಅಂಕೋಲಾ ಕೆನರಾ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಅರುಣಕುಮಾರ ತಿಳಿಸಿದರು.ಇಲ್ಲಿಯ ಪಿ.ಎಂ. ಸಂಯುಕ್ತ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಫಾಲ್ಗುಣ ಗೌಡರ ತಂದೆ ದಿ. ಚೊಕ್ಕಪ್ಪ ಕೆ. ಗೌಡ ಸ್ಮರಣಾರ್ಥ ನಡೆದ ಕವನ ಸ್ಪರ್ಧೆಯ ವಿದ್ಯಾರ್ಥಿ ಕವಿತೆಗಳ ಪುಸ್ತಕ ಹೂಮಳೆ ಬಿಡುಗಡೆ ಮಾಡಿ ಮಾತನಾಡಿದರು.ಮೈತ್ರಿ ಸೇವಾ ಸಂಸ್ಥೆಯ ಗೋಪಾಲ ಗೌಡ ಮಾತನಾಡಿ, ವ್ಯಕ್ತಿಗೆ ಸಂಸ್ಕಾರ ತುಂಬಾ ಮುಖ್ಯ. ಶಿಕ್ಷಣದಿಂದ, ಓದಿನಿಂದ ಒಳ್ಳೆಯವರ ಒಡನಾಟದಿಂದ ಸಿಗುತ್ತದೆ ಎಂದರು.

ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಹತ್ತಿರದಲ್ಲೇ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಓದಿನಲ್ಲಿ ತೊಡಗಿಕೊಳ್ಳಿ ಎಂದರು.ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಶವನಮ್ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಹಿರಿಯ ಉಪನ್ಯಾಸಕ ರಮಾನಂದ ನಾಯಕ ಸ್ವಾಗತಿಸಿ, ವಾರ್ಷಿಕ ವರದಿ ಓದಿದರು.

ಉಪನ್ಯಾಸಕರಾದ ಉಲ್ಲಾಸ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಗೌಡ ಎಂ. ಬಹುಮಾನಿತರ ಯಾದಿ ಓದಿದರು. ಉಮೇಶ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಾಗು ಕೊಕರೆ, ಆದರ್ಶ ವಿದ್ಯಾರ್ಥಿನಿ ಶ್ರೀನಿಧಿ ಆಗೇರ, ಬಹುಮುಖ ಪ್ರತಿಭೆಯ ಹಾಲಕ್ಕಿ ವಿದ್ಯಾರ್ಥಿನಿ ಯಶೋದಾ ಉದಯ ಗೌಡ ಅವರನ್ನು ಸನ್ಮಾನಿಸಲಾಯಿತು. ವಿನಾಯಕ ನಾಯ್ಕ, ಗಣಪತಿ ಗೌಡ ಸಹಕರಿಸಿದರು. ಇಂದಿನಿಂದ ಬಸ್ತಿಮಕ್ಕಿಯಲ್ಲಿ ಪೌರಾಣಿಕ ಯಕ್ಷೋತ್ಸವ ಸಪ್ತಾಹ

ಭಟ್ಕಳ: ತಾಲೂಕಿನ ಮರ್ಡೇಶ್ವರ ಸನಿಹದ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಭಾರತಿ ಹವ್ಯಕ ಸಭಾಭವನದಲ್ಲಿ ಗೋಳಿಕುಂಬ್ರಿಯ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ ಹಾಗೂ ಕೊಂಡದಕುಳಿಯ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಆಶ್ರಯದಲ್ಲಿ ಫೆ. ೮ರಿಂದ ಫೆ. ೧೪ರ ವರೆಗೆ ೧೧ನೇ ವರ್ಷದ ಪೌರಾಣಿಕ ಯಕ್ಷೋತ್ಸವ ಯಕ್ಷಗಾನ ಸಪ್ತಾಹ ನಡೆಯಲಿದೆ.ಫೆ. ೮ರಂದು ಶರತಲ್ಪ, ೯ರಂದು ಲಂಕಾದಹನ, ೧೦ರಂದು ಭೀಷ್ಮ ವಿಜಯ, ೧೧ರಂದು ದಮಯಂತಿ ಪುನಃ ಸ್ವಯಂವರ, ೧೨ರಂದು ವೀರಮಣಿ, ೧೩ರಂದು ಸತ್ಯವಾನ ಸಾವಿತ್ರಿ ಹಾಗೂ ೧೪ರಂದು ರಾವಣ ವಧೆ ಯಕ್ಷಗಾನ ಪ್ರದರ್ಶನವಾಗಲಿದೆ.ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಗಣೇಶ ಯಾಜಿ ಇಡಗುಂಜಿ, ಮೃದಂಗದಲ್ಲಿ ಗಜಾನನ ಭಂಡಾರಿ ಬೋಳಗೆರೆ, ಚಂಡೆಯಲ್ಲಿ ಲಕ್ಷ್ಮೀನಾರಾಯಣ ಹೆಗಡೆ ಸಂಪ, ಸ್ತ್ರೀ ವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರೂರು, ಹಾಸ್ಯ ಶ್ರೀಧರ ಹೆಗಡೆ ಚಪ್ಪರಮನೆ, ವೇಷಭೂಷಣ ಲಕ್ಷ್ಮಣ ನಾಯ್ಕ ಮಂಕಿ, ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ ತೋಟಿಮನೆ, ನಾಗೇಶ ಗೌಡ ಕುಳಿಮನೆ, ಮಾರುತಿ ನಾಯ್ಕ, ವಿನಾಯಕ ಮಧ್ಯಸ್ಥ, ವಿವೇಕ ಮಧ್ಯಸ್ಥ ಭಾಗವಹಿಸಲಿದ್ದಾರೆ ಎಂದು ಯಕ್ಷಗಾನ ಸಪ್ತಾಹದ ಸಂಚಾಲಕರಾದ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ, ನಾಗರಾಜ ಭಟ್ಟ ಬೇಂಗ್ರೆ ಹಾಗೂ ಕೊಂಡದಕುಳಿ ರಾಮಚಂದ್ರ ಹೆಗಡೆ ತಿಳಿಸಿದ್ದಾರೆ.