ಗೋಕರ್ಣ ಕಡಲಿನಲ್ಲಿ ವಿದ್ಯಾರ್ಥಿ ನಾಪತ್ತೆ, ಐವರ ರಕ್ಷಣೆ

| Published : Sep 12 2024, 01:57 AM IST

ಗೋಕರ್ಣ ಕಡಲಿನಲ್ಲಿ ವಿದ್ಯಾರ್ಥಿ ನಾಪತ್ತೆ, ಐವರ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ ತಾಲೂಕಿನ ಶ್ರೀನಿವಾಸಪುರದ ವಿನಯ ಎಸ್.ವಿ.(೨೨) ನಾಪತ್ತೆಯಾದ ವಿದ್ಯಾರ್ಥಿ. ಶೋಧ ಕಾರ್ಯ ಮುಂದುವರಿದಿದೆ.

ಗೋಕರ್ಣ: ಇಲ್ಲಿನ ಸಮುದ್ರದಲ್ಲಿ ಆಟವಾಡಲು ತೆರಳಿದ ವಿದ್ಯಾರ್ಥಿಗಳಲ್ಲಿ ಓರ್ವ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದು, ಐವರನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ಭಾವಿಕೊಡ್ಲ(ದುಬ್ಬನಸಸಿ) ಕಡಲತೀರದಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಶ್ರೀನಿವಾಸಪುರದ ವಿನಯ ಎಸ್.ವಿ.(೨೨) ನಾಪತ್ತೆಯಾದ ವಿದ್ಯಾರ್ಥಿ. ಶೋಧ ಕಾರ್ಯ ಮುಂದುವರಿದಿದೆ. ಅಸ್ವಸ್ಥಗೊಂಡ ಐವರು ವಿದ್ಯಾರ್ಥಿಗಳನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಕುಮಟಾದ ಆಸ್ಪತ್ರೆಗೆ ಸಾಗಿಸಲಾಗಿದೆ.

ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ ೪೮ ವಿದ್ಯಾರ್ಥಿಗಳು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಮೋಜುಮಸ್ತಿ ಮಾಡಲು ತೆರಳಿದ್ದರು. ಆಗ ಹಲವರು ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದರು. ಅವರನ್ನು ಗಮನಿಸಿ ಸ್ಥಳೀಯರಾದ ದುಬ್ಬಸಸಿಯ ಸರ್ವೇಶ ಮೊರ್ಜೆ, ಪಂಢರಿನಾಥ ಮೂರ್ಜೆ ಅವರು ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ಇವರಿಗೆ ಕರಾವಳಿ ಕಾವಲು ಪೊಲೀಸ್ ಪಡೆಯವರು ಸಹಕರಿಸಿ ಹರಸಾಹಸ ಮಾಡಿ ಐವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ. ಘಟನೆಯಲ್ಲಿ ಕೋಲಾರ ತಾಲೂಕಿನ ಶ್ರೀನಿವಾಸಪುರದ ವಿನಯ ಎಸ್.ವಿ. ಎಂಬವರು ನಾಪತ್ತೆಯಾಗಿದ್ದಾರೆ.

ಪಿಐ ವಸಂತ್ ಆಚಾರ್, ಪಿಎಸ್ಐ. ಖಾದರ್ ಬಾಷಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಲಿಫ್ಟ್‌ನ ಚೈನ್‌ ತುಂಡಾಗಿ ಕಾರ್ಮಿಕ ಸಾವು

ಕುಮಟಾ: ಲಿಫ್ಟ್‌ನ ಚೈನ್‌ ತುಂಡಾಗಿ ಅದರಡಿ ಸಿಲುಕಿದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಪಟ್ಟಣದ ಸುಭಾಸ ರಸ್ತೆಯಲ್ಲಿರುವ ಜಗದಂಬಾ ಎಲೆಕ್ಟ್ರಿಕಲ್ ಮಳಿಗೆಯಲ್ಲಿ ಬುಧವಾರ ನಡೆದಿದೆ.

ಮೃತನನ್ನು ಜಗದಂಬಾ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಕಾರ್ಮಿಕ ರಾಜಸ್ಥಾನದ ಜೋಧಪುರ ಜಿಲ್ಲೆಯ ಓಸಿಯಾ ತಾಲೂಕಿನ ಇಂದೋ ಗ್ರಾಮದ ನಿವಾಸಿ ಗೋಪಾಲಸಿಂಗ್ ಭವರ್‌ಸಿಂಗ್ (೨೪) ಎಂದು ಗುರುತಿಸಲಾಗಿದೆ.

ಅಂಗಡಿಯಲ್ಲಿ ಗ್ರಾಹಕರಿಗೆ ಬೇಕಾದ ಸಾಮಗ್ರಿಗಳನ್ನು ತರಲು ಮೇಲಂತಸ್ತಿಗೆ ತೆರಳಿದ್ದ ಕಾರ್ಮಿಕ ಗೋಪಾಲಸಿಂಗ್ ಲಿಫ್ಟ್‌ನಲ್ಲಿ ಸಾಮಗ್ರಿ ಇರಿಸಿಕೊಂಡು ಕೆಳಗಿಳಿಯುವ ಹಂತದಲ್ಲಿ ಲಿಫ್ಟ್‌ನ ಚೈನ್ ತುಂಡಾಗಿದೆ. ಈ ವೇಳೆ ಗೋಪಾಲಸಿಂಗ್ ಎದೆಭಾಗ ಲಿಫ್ಟ್‌ಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅದೇ ಅಂಗಡಿಯ ಇನ್ನೋರ್ವ ಕಾರ್ಮಿಕ ಉದಯ ಮಹಾದೇವ ನಾಯ್ಕ ಪೊಲೀಸರಿಗೆ ದೂರಿದ್ದಾರೆ.ಈ ಕುರಿತು ಜಗದಂಬಾ ಎಲೆಕ್ಟ್ರಿಕಲ್ಸ್‌ನ ಮಾಲೀಕರಾದ ನರೇಂದ್ರಸಿಂಗ್ ಮಾಂಗುಸಿಂಗ್ ರಾಠೋಡ ಹಾಗೂ ಲಕ್ಷ್ಮಣಸಿಂಗ್‌ ಮಾಂಗುಸಿಂಗ್‌ ರಾಠೋಡ ಅವರ ಮೇಲೆ ಅಸುರಕ್ಷಿತ ಮತ್ತು ಅಪೂರ್ಣ ಲಿಫ್ಟ್‌ನಲ್ಲಿ ಕೆಲಸಗಾರರಿಂದ ಸಾಮಗ್ರಿ ತರಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.