ಸಾರಾಂಶ
ರಾಜ್ಯದಲ್ಲಿ ದಿನೇ ದಿನೇ ಹೆಣ್ಣು ಮಕ್ಕಳ ರಕ್ಷಣೆ ಕಡಿಮೆಯಾಗುತ್ತದೆ. ನೇಹಾರನ್ನು ಕೊಲೆ ಮಾಡಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಗಮನಹರಿಸಿ ಕಾಲಹರಣ ಮಾಡದೆ ಕೊಲೆ ಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಹುಬ್ಬಳ್ಳಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾರನ್ನು ಅಮಾನುಷವಾಗಿ ಕೊಲೆ ಮಾಡಿರುವ ಆರೋಪಿ ಫೈರೋಜ್‌ಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.ವೇದಿಕೆ ಜಿಲ್ಲಾಧ್ಯಕ್ಷ ವಳಗೆರಹಳ್ಳಿ ವಿ.ಸಿ.ಉಮಾಶಂಕರ್ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ಹೆಣ್ಣು ಮಕ್ಕಳ ರಕ್ಷಣೆ ಕಡಿಮೆಯಾಗುತ್ತದೆ. ನೇಹಾರನ್ನು ಕೊಲೆ ಮಾಡಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಗಮನಹರಿಸಿ ಕಾಲಹರಣ ಮಾಡದೆ ಕೊಲೆ ಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಆಗ್ರಹಿಸಿದರು.
ತಪ್ಪಿತಸ್ಥರ ವಿರುದ್ಧ ಮುಲಾಜಿ ಇಲ್ಲದೆ ಕ್ರಮವಹಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸರ್ಕಾರ ಕ್ರಮ ವಹಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂಥ ಅಮಾನವೀಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಸರ್ಕಾರ ವರ್ತಿಸಬಾರದು. ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಹಿರಿಯ ಮುಖಂಡ ಬೋರಾಪುರ ಶಂಕರೇಗೌಡ ಮಾತನಾಡಿ, ಸಂತ್ರಸ್ತೆ ನೇಹಾ ಅವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ಪರಿಹಾರವನ್ನು ಮಂಜೂರು ಮಾಡಬೇಕು. ಯಾರು ರಾಜಕೀಯ ಮಾಡದೆ ತಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸರ್ಕಾರ ಕ್ರಮ ವಹಿಸಬೇಕು. ನಮ್ಮ ಮನೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಿದ್ದರೆ ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಬಸವರಾಜು, ಮಾಜಿ ಸದಸ್ಯ ಮಂಜುನಾಥ, ನ.ಲಿ. ಕೃಷ್ಣ, ಸೋಂಪುರ ಉಮೇಶ್, ಬೋರಾಪುರ ಶಂಕರೇಗೌಡ, ಗೊರವನಹಳ್ಳಿ ಪ್ರಸನ್ನ, ವಿ.ಎಚ್. ಶಿವಲಿಂಗಯ್ಯ, ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಮಹಾಲಿಂಗು, ಸಕ್ಕರೆ ನಾಗರಾಜು, ಸಿದ್ದರಾಮು, ಕಾಳಯ್ಯ, ಕೃಷ್ಣಪ್ಪ, ಮಹಾದೇವಾ ಸೇರಿದಂತೆ ಇತರರಿದ್ದರು.