ಸಾರಾಂಶ
ಹಾವೇರಿ: ಚಿತ್ರದುರ್ಗದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಎಲ್‌ಐಸಿ ಬಸ್ ನಿಲ್ದಾಣದಿಂದ ವಾಲ್ಮೀಕಿ ವೃತ್ತದವರೆಗೆ ವಿದ್ಯಾರ್ಥಿಗಳು ಬೃಹತ್ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ವಿದ್ಯಾಭ್ಯಾಸ ಮುಗಿಸಿ ಸುರಕ್ಷಿತವಾಗಿ ಮನೆಗೆ ತಲುಪಬೇಕಾದ ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಬಳಿ ಕ್ರೂರವಾಗಿ ಹತ್ಯೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದ್ದು, ಕಳೆದ ಎರಡು ದಿನಗಳಿಂದ ವಿದ್ಯಾರ್ಥಿನಿಯು ಕಾಣೆಯಾಗಿದ್ದು, ಅರೆಬರೆ ಸುಟ್ಟ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಆತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆಯಿದೆ. ಕೂಡಲೇ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಕಾಲೇಜು ಘಟಕ ಕಾರ್ಯದರ್ಶಿ ಗಂಗಾ ಯಲ್ಲಾಪುರ ಮಾತನಾಡಿ, ಬೇಟಿ ಬಚಾವೋ, ಬೇಟಿ ಪಢಾವೋ ಎಂದು ಹೇಳುತ್ತಾರೆ. ಆದರೆ ಓದಿಸುವುದು ಅಷ್ಟೇ ಅಲ್ಲ, ಕಾಪಾಡುವುದು ಕರ್ತವ್ಯವಾಗಬೇಕು. ಕೂಡಲೇ ವಿದ್ಯಾರ್ಥಿನಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ವಿದ್ಯಾರ್ಥಿನಿ ಪ್ರೇಮಾ ಪೂಜಾರ, ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್ ಮಾತನಾಡಿದರು. ಎಸ್‌ಎಫ್‌ಐ ಮುಖಂಡ ಫಕ್ಕೀರೇಶ ಮ್ಯಾಗಳಮನಿ, ಸುನೀಲ್ ಕುಮಾರ್ ಎಲ್., ಧನುಷ್ ದೊಡ್ಡಮನಿ, ಸುದೀಪ್ ಲಮಾಣಿ, ಲಕ್ಷ್ಮಿ ಹೊಲ್ಲೂರು, ದೀಪ ಕುಲಕರ್ಣಿ, ಸುಶ್ಮಿತಾ ಕೆ., ಹೊನ್ನಮ್ಮ ಎಂ., ಚಂದನ ಬಿ., ಪ್ರತಿಭಾ ಮಾದರ್, ಭೂಮಿಕಾ ಎಂ., ಜಯಶ್ರೀ, ಅಪೇಕ್ಷ ಕಿತ್ತೂರು, ಭೂಮಿಕಾ ಪಿ.ಜಿ., ದ್ರಾಕ್ಷಾಯಿಣಿ ಶಿರೂರು, ಅನು ಸಿ., ಸಹನ ಎಸ್., ಅಕ್ಷತಾ ಎಂ., ಕಾವೇರಿ ಎಚ್., ನವೀನ್ ಲಮಾಣಿ, ತುಕಾರಾಂ ಲಮಾಣಿ, ಕಿರಣ್ ಲಮಾಣಿ ಇತರರು ಪಾಲ್ಗೊಂಡಿದ್ದರು.