ಹುಬ್ಬಳ್ಳಿ:

ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ಸಿಗುವ ವರೆಗೂ ಹೋರಾಟ ನಡೆಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡಕ್ಕೆ ಓದಲು ಬಂದಿದ್ದ ಬಾಗಲಕೋಟೆ ಮೂಲದ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ನೋವಿನ ಸಂಗತಿ. ಅಮಾಯಕ ವಿದ್ಯಾರ್ಥಿಯನ್ನು ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಶೀಘ್ರವೇ ನ್ಯಾಯಯುತ ತನಿಖೆ ನಡೆಸುವಂತೆ ಹಾಗೂ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥ ಪೊಲೀಸ್ ಇನ್‌ಸ್ಪೆಕ್ಟರ್‌ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ರಾಜ್ಯ ಸರ್ಕಾರ ಇಡೀ ಪ್ರಕರಣದ ನೈತಿಕ ಹೊಣೆ ಹೊರಬೇಕು ಮತ್ತು ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಚಿವರು ಆಗ್ರಹಿಸಿದ್ದಾರೆ.

ಗಾಂಜಾ ಮುಕ್ತ ನಗರ ಹೆಸರಿನಲ್ಲಿ ಅಮಾಯಕರ ಸುಲಿಗೆ ಖಂಡನೀಯ: ಬೆಲ್ಲದ


ಧಾರವಾಡದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಮ್ಯಾಗೇರಿ ಪೊಲೀಸರ ಭ್ರಷ್ಟಾಚಾರ ಹಾಗೂ ಕಿರುಕುಳಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಇಡೀ ಸಮಾಜ ತಲೆ ತಗ್ಗಿಸುವಂತಹದ್ದು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಾಂಜಾ ಮುಕ್ತ ನಗರಕ್ಕೆ ಪೊಲೀಸ್‌ ಇಲಾಖೆ ಮುಂದಾಗಿರುವುದು ಒಳ್ಳೆಯ ಕೆಲಸ. ಆದರೆ, ಇದರ ಹೆಸರಿನಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಹಣ ಕೇಳಿ ದೌರ್ಜನ್ಯ ಎಸಗುವ ಕ್ರಮ ಖಂಡನೀಯ. ಆದಿತ್ಯ ಗಾಂಜಾ ಸೇವನೆ ಮಾಡಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯ ವರದಿಯಿಂದ ಸಾಬೀತಾದರೂ ಆತನ ಬಿಡುಗಡೆ ಪೊಲೀಸರು ₹ 10 ಸಾವಿರಕ್ಕೆ ಬೇಡಿಕೆ ಇಟ್ಟು ಆತ್ಮಹತ್ಯೆ ಮಾಡುಕೊಳ್ಳುವಂತೆ ಮಾಡಿದ್ದು ಹೇಯ ಕೃತ್ಯ ಎಂಉ ಖಂಡಿಸಿದ್ದಾರೆ.ಕೂಡಲೇ ಈ ಘಟನೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಅವರ ಮೇಲೆ ಕೊಲೆ ಪ್ರಚೋದನೆಯ ಮೊಕದ್ದಮೆ ದಾಖಲಿಸಬೇಕು. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಬೆಲ್ಲದ ಆಗ್ರಹಿಸಿದ್ದಾರೆ.