ಸರಸ್ವತಿಪುರಂ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

| Published : Jul 14 2024, 01:37 AM IST

ಸಾರಾಂಶ

ಸ್ತುತ ಶೈಕ್ಷಣಿಕ ವರ್ಷದ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಲಿ

ಕನ್ನಡಪ್ರಭ ವಾರ್ತೆ ಮೈಸೂರು

ಸರಸ್ವತಿಪುರಂ ಜೆಎಸ್ಎಸ್ ಪ್ರೌಢಶಾಲಾ ವಿದ್ಯಾರ್ಥಿ ಸಂಘವನ್ನು ಓಂಕಾರ್ ಮಲ್ ಸೋಮಾನಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ. ಮಲ್ಲಿಕಾರ್ಜುನ ಶಾಸ್ತ್ರಿ ಉದ್ಘಾಟಿಸಿದರು.

ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಲಿ, ತಮ್ಮಲ್ಲಿ ಸ್ಪರ್ಧಾತ್ಮಕ ಯುಗವನ್ನು ಎದುರಿಸಿ ನಿಲ್ಲುವ ಶಕ್ತಿ ಬರಲಿ ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಹೊರತೆಗೆಯುವ ವೇದಿಕೆಯಾಗಲಿ ಎಂದು ಹೇಳುತ್ತಾ ಸರ್ವಜ್ಞನ ವಚನವನ್ನು ಉದಾಹರಣೆಯಾಗಿ ನೀಡಿ ಹೇಗೆ ಓದಬೇಕು ಎಂದು ಅವರು ಹೇಳಿದರು.

ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಉಪನ್ಯಾಸಕ ಅಮೂಲ್ಯ ಅವರು 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಎನ್.ಸಿಸಿ ವಿಭಾಗದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ ಏಕಾಗ್ರತೆಯಿಂದ ವಿದ್ಯಾರ್ಜನೆಮಾಡುವುದರೊಂದಿಗೆ ಸಹ ಪಠ್ಯ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲು ಇಂತಹ ವಿದ್ಯಾರ್ಥಿ ಸಂಘವು ವೇದಿಕೆಯಾಗಿದ್ದು, ಇದರ ಸದ್ಬಳಕೆಯ ಮಾಡಿಕೊಂಡು ಗುರಿ ಮುಟ್ಟಬೇಕು ಎಂದು ಕರೆ ನೀಡುತ್ತಾ ಹಾಡುಗಳನ್ನು ಹಾಡಿ ಮನರಂಜನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾದ್ಯಾಯ ಮಹದೇವಪ್ಪ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿದ್ಯಾರ್ಥಿಸಂಘ ಅವಶ್ಯಕವಾಗಿದ್ದು, ಈ ವೇದಿಕೆಯನ್ನು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಮುಕ್ತವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಾದ ನೀಲಮ್ಮ ಮತ್ತು ತಂಡ ಪ್ರಾರ್ಥಿಸಿದರು. ಗಗನ ಸ್ವಾಗತಿಸಿದರು. ಸಾಧನ ವಂದಿಸಿದರು. ಶ್ರೀಜಾ ನಿರೂಪಿಸಿದರು.