ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯಾರ್ಥಿ ಸಂಘ ಸಾಂಘಿಕ ಶಕ್ತಿಯಿದ್ದಂತೆ: ಬಿ. ನಿರಂಜನಮೂರ್ತಿ

| Published : Jul 10 2025, 12:46 AM IST

ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯಾರ್ಥಿ ಸಂಘ ಸಾಂಘಿಕ ಶಕ್ತಿಯಿದ್ದಂತೆ: ಬಿ. ನಿರಂಜನಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಸಂಘವು ಶಾಲಾ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಕಾರ್‍ಯನಿರ್ವಹಿಸುತ್ತದೆ ಎಂದರು.ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಿ ಕೆಟ್ಟ ವಿಚಾರಗಳನ್ನು ಬಿಟ್ಟು, ಒಳ್ಳೆಯ ಆಲೋಚನೆಯ ಕಡೆಗೆ ಗಮನ ಹರಿಸಬೇಕು. ಯಾವುದೇ ದುಶ್ವಟಗಳಿಗೆ ಬಲಿಯಾಗದೆ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯಾರ್ಥಿ ಸಂಘ ಒಂದು ಸಾಂಘಿಕ ಶಕ್ತಿ ಇದ್ದಂತೆ ಎಂದು ಮೈಸೂರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಕಾಲೇಜು ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಹೇಳಿದರು.

ನಗರದ ಜೆಎಸ್‌ಎಸ್ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಜೀವನದಲ್ಲಿ ಮರೆಯಲಾರದ ನೆನಪುಗಳು ಎಂದರು.

ವಿದ್ಯಾರ್ಥಿ ಸಂಘ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಕಲಿಸುವುದರ ಜೊತೆ ಜವಾಬ್ದಾರಿಯನ್ನು ಕಲಿಸುತ್ತದೆ, ವಿದ್ಯಾರ್ಥಿ ಸಂಘವು ಶಾಲಾ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಕಾರ್‍ಯನಿರ್ವಹಿಸುತ್ತದೆ ಎಂದರು.

ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಿ ಕೆಟ್ಟ ವಿಚಾರಗಳನ್ನು ಬಿಟ್ಟು, ಒಳ್ಳೆಯ ಆಲೋಚನೆಯ ಕಡೆಗೆ ಗಮನ ಹರಿಸಬೇಕು. ಯಾವುದೇ ದುಶ್ವಟಗಳಿಗೆ ಬಲಿಯಾಗದೆ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿಗಳಿಂದ ಶಿಕ್ಷಣ, ನಿಗದಿತ ವೇಳಾಪಟ್ಟಿಯನ್ನು ಸಿದ್ಧಮಾಡಿಕೊಂಡು ವಿದ್ಯಾಭ್ಯಾಸ ಮಾಡಬೇಕು, ಗುರಿಯೊಂದಿಗೆ ಪೋಷಕರು ನಿಮ್ಮ ಮೇಲೆ ಇಟ್ಟ ಭರವಸೆಯನ್ನು ಉಳಿಸಿಕೊಳ್ಳಬೇಕು ಎಂದರು.

ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲಾ ವ್ಯವಸ್ಥೆಯನ್ನು ಮಾಡಿದೆ, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ನಿಮಗೆ ಸ್ಫೂರ್ತಿಯಾಗಬೇಕು ಎಂದರು.

ಕ್ಷಣಿಕ ಸುಖವನ್ನು ಕೊಡುವ ವಸ್ತುಗಳಿಂದ ದೂರವಿದ್ದು, ಶಿಸ್ತನ್ನು ರೂಢಿಸಿ, ಸಮಸ್ಯೆಗಳು ಬಂದಾಗ ಶಿಕ್ಷಕರೊಡನೆ ಚರ್ಚಿಸಿ, ಮಾರ್ಗದರ್ಶನ ಪಡೆದು ಮುಂದಿನ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದರು.

ಯಾರು ಶಿಕ್ಷಣದಿಂದ ವಂಚಿತರಾಗಬಾರದೆಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಕುಗ್ರಾಮಗಳಲ್ಲೂ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿದೆ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದರು.

ಜೆಎಸ್‌ಎಸ್ ಅಕ್ಷರ ದಾಸೋಹ ಸಮಿತಿ ಅಧ್ಯಕ್ಷ ಆರ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿದ್ದಪ್ಪ ಮುಖ್ಯ ಅತಿಥಿಗಳಾಗಿದ್ದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದಿದ್ದ ದಿವ್ಯಶ್ರೀ ಹಾಗೂ ಯೋಗೇಶ್ವರಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಮುಖ್ಯೋಪಾಧ್ಯಾಯರಾದ ಎನ್. ಜಿ. ನಾಗೇಶ್ವರಿ ಸ್ವಾಗತಿಸಿದರು, ವಿದ್ಯಾರ್ಥಿನಿ ರಶ್ಮಿ ನಿರೂಪಿಸಿದರು.

ಶಿಕ್ಷಕರು, ಸಂಸ್ಥೆಯ ಸಿಬ್ಬಂದಿ ವರ್ಗ ಇದ್ದರು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.