ಸಾರಾಂಶ
Student wrote SSLC exam in pain of father's death!
- ಪರೀಕ್ಷೆ ಬರೆದ ನಂತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪುತ್ರ ಶ್ರೀಶೈಲ
ಕನ್ನಡಪ್ರಭ ವಾರ್ತೆ ಯಾದಗಿರಿತಂದೆ ಸಾವಿನ ನೋವಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ನಂತರ ಅಂತ್ಯಕ್ರಿಯೆಯಲ್ಲಿ ಪುತ್ರ ಪಾಲ್ಗೊಂಡ ಹೃದಯವಿದ್ರಾವಕ ಘಟನೆ ಬುಧವಾರ ಯಾದಗಿರಿಗೆ ಸಮೀಪದ ಕಂಚಗಾರ ಹಳ್ಳಿಯಲ್ಲಿ ನಡೆದಿದೆ.
ಅಲ್ಲಿಪೂರ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ (50) ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾದರು. ಎಸ್ಸೆಸ್ಸೆಲ್ಸಿ ಓದುತ್ತಿರುವ ಇವರ ಪುತ್ರ ಶ್ರೀಶೈಲ ಹಾಗೂ ಕುಟುಂಬ ಶೋಕಸಾಗರದಲ್ಲಿ ಮುಳುಗಿತು, ಬುಧವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇರೆ. ಆದರೆ, ಜೀವನದಲ್ಲಿ ಶಿಕ್ಷಣ- ಕಲಿಕೆ ಮುಖ್ಯ ಎಂಬ ತಂದೆಯ ಆಶಯದಂತೆ ಮಾ.26 ರ ಬುಧವಾರ ನಡೆದ ಆಂಗ್ಲ ಭಾಷಾ ಪರೀಕ್ಷೆಗೆ ತಂದೆ ಅಗಲಿಕೆಯ ಶೋಕದಲ್ಲೇ ತೆರಳಿದ ಪುತ್ರ ಶ್ರೀಶೈಲ, ಪರೀಕ್ಷೆ ಮುಗಿಸಿ ಬಂದ ನಂತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾನೆ. ವಿದ್ಯಾರ್ಥಿ ಶ್ರೀಶೈಲ ತಮ್ಮ ಗ್ರಾಮದಿಂದ 10 ಕಿ.ಮೀ. ದೂರದಲ್ಲಿರುವ ಯರಗೋಳದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾನೆ."ತಂದೆಯ ಸಾವು ಅತೀವ ದು:ಖ ತಂದಿದೆ. ಆದರೆ, ತಂದೆಯ ಆಶಯದಂತೆ ಭವಿಷ್ಯ ರೂಪಿಸಿಕೊಳ್ಳಲು ಪರೀಕ್ಷೆಗೆ ಹೋಗಿದ್ದೇನೆ. ನನ್ನ ಹಿರಿಯ ಸಹೋದರ ರಾಜಶೇಖರ ನನಗೆ ಧೈರ್ಯ ತುಂಬಿದ್ದಾನೆ. ಸ್ನೇಹಿತರು ನನ್ನ ಜೊತೆಯಲ್ಲಿ ಆಗಮಿಸಿ ಪರೀಕ್ಷೆಗೆ ಕುಳಿತುಕೊಳ್ಳಲು ಧೈರ್ಯ ತುಂಬಿದರು. ಪರೀಕ್ಷೆ ಮುಗಿದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದೆ.. " ಎಂದು ಶ್ರೀಶೈಲ ತಿಳಿಸಿದ.
----26ವೈಡಿಆರ್20 : ಶ್ರೀಶೈಲ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ.