ವಿದ್ಯಾರ್ಥಿಗಳ ಉತ್ತಮ ಸಾಧನೆಯೇ ಪೋಷಕರಿಗೆ ಕೊಡುಗೆ

| Published : Jul 17 2024, 12:55 AM IST

ಸಾರಾಂಶ

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಿಜಿಎಸ್‌ ಪಿಯು ಕಾಲೇಜಿನ ಸ್ವಾಗತೋತ್ಸವ-೨೦೨೪ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ಕಲಿತು, ಓದುವ ಕಡೆ ಹೆಚ್ಚಿನ ಗಮನ ನೀಡಿ, ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಇರುವುದೇ ಪೋಷಕರಿಗೆ ನೀವು ಕೊಡುವ ಬಹುದೊಡ್ಡ ಕೊಡುಗೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ಕಲಿತು, ಓದುವ ಕಡೆ ಹೆಚ್ಚಿನ ಗಮನ ನೀಡಿ, ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಇರುವುದೇ ಪೋಷಕರಿಗೆ ನೀವು ಕೊಡುವ ಬಹುದೊಡ್ಡ ಕೊಡುಗೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು. ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಿಜಿಎಸ್‌ ಪಿಯು ಕಾಲೇಜಿನ ಸ್ವಾಗತೋತ್ಸವ-೨೦೨೪ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿ ಜೀವನವನ್ನು ಸುಲಭವಾಗಿ ಪರಿಗಣಿಸಬೇಡಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟೇ ಕಲಿತರೂ ಸಾಲದು. ಅಧ್ಯಯನಶೀಲರಾಗಿ ಕೌಶಲ್ಯ, ಜ್ಞಾನ ಬೆಳೆಸಿಕೊಂಡು ಮುನ್ನಡೆಯಿರಿ. ಬದುಕು ರೂಪಿಸುವ ವಿದ್ಯಾರ್ಥಿ ಜೀವನದಲ್ಲಿ ಸೋತರೆ ಜೀವನದುದ್ದಕ್ಕು ಕಷ್ಟದ ಹಾದಿಯಲ್ಲಿ ಕ್ರಮಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಪೋಷಕರು ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಉಣ ಬಡಿಸಬೇಕು. ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯುವುದಿಲ್ಲ ತಮ್ಮ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕು ಜೊತೆಗೆ ಅವರಿಗೆ ನಡೆ-ನುಡಿಯ ಬಗೆಗೆ ಮಾರ್ಗದರ್ಶನ ಮಾಡಬೇಕು ಆಗ ಮಾತ್ರ ವಿದ್ಯಾರ್ಥಿಗಳು ಈ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು. ಸಂಪನ್ಮೂಲ ವ್ಯಕ್ತಿ ಡಾ.ಹೇಮಚಂದ್ರ ಮಾತನಾಡಿ, ಕಷ್ಟಕರವಾದ ಹಾದಿ ನಮ್ಮನ್ನು ಸುಂದರವಾದ ಪ್ರದೇಶಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ಮರೆಯಬೇಡಿ ಅಂತೆಯೇ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗೆ ಮುಂದೆ ಉತ್ತಮ ಭವಿಷ್ಯವಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಓದಲು ಅಸಡ್ಡೆ ತೋರಿದರೆ ಮುಂದಿನ ಬದುಕು ಕಷ್ಟವಾಗುತ್ತದೆ. ಹಾಗಾಗೀ ದೊಡ್ಡ ಗುರಿ ಮುಂದಿಟ್ಟುಕೊಂಡು ಉತ್ತಮ ವಿದ್ಯಾಭ್ಯಾಸ ನಡೆಸಿ ಸಾಧಕರಾಗಿ ಹೊರಹೊಮ್ಮಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿದರು. ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಬಿಜಿಎಸ್ ಪಿಯು ಕಾಲೇಜಿನ ಸ್ವಾಗತೋತ್ಸವ-೨೦೨೪ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮೋಹನ್, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಇತರರು ಉಪಸ್ಥಿತರಿದ್ದರು.