ವಿದ್ಯಾರ್ಥಿಗಳು ಹೆತ್ತವರು, ಕನ್ನಡ ಭಾಷೆ ಮರೆಯದಿರಲಿ: ಅಧ್ಯಕ್ಷೆ ಸುಮತಿ ಜಯಪ್ಪ

| Published : Nov 11 2025, 02:15 AM IST

ಸಾರಾಂಶ

ಇಡೀ ಪ್ರಪಂಚದಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆ ಶ್ರೇಷ್ಠವಾಗಿದ್ದು, ಕನ್ನಡನಾಡು ಭಾರತದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದ್ದಾರೆ.

- ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯೋತ್ಸವ, ಯತ್ನಿಕ್‌ ಡೇ

- - -

ದಾವಣಗೆರೆ: ಇಡೀ ಪ್ರಪಂಚದಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆ ಶ್ರೇಷ್ಠವಾಗಿದ್ದು, ಕನ್ನಡನಾಡು ಭಾರತದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದರು.

ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಎಸ್.ಎಸ್.ಎಂ. ಸಾಂಸ್ಕೃತಿಕ ಕೇಂದ್ರದಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿ ಪರಿಷತ್ತು ಉದ್ಘಾಟನೆ, ಕನ್ನಡ ರಾಜ್ಯೋತ್ಸವ, ಸಾಂಪ್ರದಾಯಿಕ (ಯತ್ನಿಕ್‌ ಡೇ) ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಕನ್ನಡ ಭಾಷೆಗೆ 4500 ವರ್ಷಗಳ ಇತಿಹಾಸವಿದ್ದು. ಕನ್ನಡವು ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಮೈಸೂರು, ಹೊಯ್ಸಳ ಮತ್ತು ವಿಜಯನಗರ ಅರಸರ ಆಸ್ಥಾನ ಭಾಷೆಯಾಗಿತ್ತು. ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಉಲ್ಲೇಖಿಸಿದ ಅವರು, ರತ್ನ ಬಡವನಾದರೂ ಕನ್ನಡಪ್ರೇಮಿಯಾಗಿದ್ದ. ರತ್ನನ ಕನ್ನಡಪ್ರೇಮ ಈಗ ಪ್ರಸ್ತುತವಾಗಿದೆ. ವಿದ್ಯಾರ್ಥಿಗಳು ಎಲ್ಲಿಯೇ ಇರಲಿ ಕನ್ನಡ ಮತ್ತು ತಮ್ಮ ತಂದೆ-ತಾಯಿಯನ್ನು ಮರೆಯಬಾರದು ಎಂದು ಹೇಳಿದರು.

ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ಮಾತನಾಡಿ, ಯಾವುದೇ ಭಾಷೆ ಬಳಕೆಯಲ್ಲಿದ್ದರೆ ಮಾತ್ರ ಉಳಿಯಬಲ್ಲದು. ಕೆಲವು ಗ್ರಾಮ್ಯ ಪದಗಳಾದ ಹಂಡೆ, ನಿಲುವು, ಹೊಸಿಲು ಮುಂತಾದವುಗಳ ಬಳಕೆ ಸಂಪೂರ್ಣ ನಿಂತು ಹೋಗುತ್ತಿದೆ. ಪದಗಳನ್ನು ಬಳಸದೇ ಹೋದರೆ ಅವು ನಶಿಸಿ ಹೋಗುವ ಅಪಾಯವಿದೆ. ಕಥೆ, ಕವನ, ಸಾಹಿತ್ಯ ಓದುವುದರಿಂದ ವಿದ್ಯಾರ್ಥಿಗಳು ಮನಸಿನ ಮೇಲಾಗುವ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್, ನಿಸರ್ಗ ಮತ್ತು ತಂಡದವರು ಪ್ರಾರ್ಥಿಸಿದರು. ಕೆ.ಎಂ. ಗಾನವಿ ಸ್ವಾಗತಿಸಿದರು. ಡಾ. ಎಚ್.ಪಿ.ವಿನುತಾ, ಡಾ. ಜಿ.ಮಾನವೇಂದ್ರ, ಡಾ. ಕೆ.ಸಿ.ದೇವೇಂದ್ರಪ್ಪ, ವಿದ್ಯಾರ್ಥಿ ಪರಿಷತ್ತು ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂಭ್ರಮಿಸಿದರು.

- - -

-7ಕೆಡಿವಿಜಿ41: ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಯತ್ನಿಕ್ ಡೇ, ವಿದ್ಯಾರ್ಥಿ ಪರಿಷತ್‌ ಕಾರ್ಯಕ್ರಮವನ್ನು ಸುಮತಿ ಜಯಪ್ಪ ಉದ್ಘಾಟಿಸಿದರು.