ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯು ಪ್ರೇರಣಾ ಶಿಬಿರಗಳ ಮೂಲಕ ಹೆಣ್ಣು ಮಕ್ಕಳಿಗೆ ಎದುರಾಗುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಮಾಹಿತಿ ನೀಡುತ್ತಿದೆ. ಸಂಸ್ಥೆ ಅಧ್ಯಕ್ಷರಾದ ಸಿ.ಎಸ್.ಪುಟ್ಟರಾಜು ಅವರು ಶಿಬಿರವನ್ನು ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನೂತನವಾಗಿ ರೇಂಜರ್ ಘಟಕವನ್ನು ಸಹ ಆರಂಭಿಸಲಾಗುತ್ತಿದೆ .

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶದ ಹಿತದೃಷ್ಠಿಯಿಂದ ವಿದ್ಯಾರ್ಥಿಗಳು, ಯುವ ಜನಾಂಗ ಸೇರಿದಂತೆ ಪ್ರತಿಯೊಬ್ಬರೂ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ, ಬಾಲಕಿಯರ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕ ಹಾಗೂ ಬಾಲಕಿಯ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಜಿಲ್ಲಾಮಟ್ಟದ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರ ಪ್ರೇಮ ಎನ್ನುವುದು ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಭಾರತೀಯರೂ ತಮ್ಮ ಅಂತರಾಳದಲ್ಲಿ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದರು.

ಇಸ್ರೇಲ್ ಎಂಬ ಸಣ್ಣ ದೇಶ ಸುತ್ತಲೂ ಶತ್ರು ರಾಷ್ಟ್ರಗಳನ್ನೇ ಹೊಂದಿದೆ. ಇಸ್ರೇಲ್ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ 3 ವರ್ಷಗಳ ಕಾಲ ಸೇನೆ ಸೇರಿ ತರಬೇತಿ ಪಡೆದು ದೇಶಪ್ರೇಮ, ಶಿಸ್ತು ಬೆಳೆಸಿಕೊಳ್ಳುತ್ತಾರೆ. ಅದಕ್ಕಾಗಿ ಆ ದೇಶದಲ್ಲಿ ಸೇನೆ ಬಲಿಷ್ಠವಾಗಿದೆ. ಜತೆಗೆ ಅಭಿವೃದ್ಧಿ ಪಥದಲ್ಲೂ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲೂ ಸಹ ಸೇನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮಗೂ ಸಹ ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾ ಶತ್ರು ದೇಶಗಳ ಹಾವಳಿ ಒಂದೆಡೆಯಾದರೆ ಟೆರರಿಸ್ಟ್ ಗಳ ಹಾವಳಿ ನಡುವೆ ದೇಶವನ್ನು ರಕ್ಷಣೆ ಮಾಡಲಾಗುತ್ತಿದೆ. ಹಾಗಾಗಿ ನಾವೆಲ್ಲರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸದೃಢ ದೇಶ ನಿರ್ಮಾಣ ಮಾಡಲು ಸಾಧ್ಯ. ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಸಂಸ್ಥೆಯೂ ಅರೆಸೈನ್ಯ ಹುಟ್ಟುಹಾಕುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ಜಿಲ್ಲಾ ಸಂಘಟಿಕ ಚಂದ್ರು ಮಾತನಾಡಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯು ಪ್ರೇರಣಾ ಶಿಬಿರಗಳ ಮೂಲಕ ಹೆಣ್ಣು ಮಕ್ಕಳಿಗೆ ಎದುರಾಗುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಮಾಹಿತಿ ನೀಡುತ್ತಿದೆ. ಸಂಸ್ಥೆ ಅಧ್ಯಕ್ಷರಾದ ಸಿ.ಎಸ್.ಪುಟ್ಟರಾಜು ಅವರು ಶಿಬಿರವನ್ನು ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನೂತನವಾಗಿ ರೇಂಜರ್ ಘಟಕವನ್ನು ಸಹ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಾಲಕಿಯರ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಜೀವಿತ ಅವರನ್ನು ಸಂಸ್ಥೆ ಅಧ್ಯಕ್ಷರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷ ರಾಮಕೃಷ್ಣೇಗೌಡ, ಪ್ರಾಂಶುಪಾಲರಾದ ಮಮತ, ಆಡಳಿತಾಧಿಕಾರಿ ಮಂಜುಳ, ಮುಖ್ಯಶಿಕ್ಷಕಿ ಲತಾ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಚ್.ಕೆ.ಶಿವರಾಮೇಗೌಡ, ಕಾರ್ಯದರ್ಶಿ ಸಿ.ಮಹೇಶ್, ರಮೇಶ್, ಮಹದೇವನಾಯ್ಕ್, ತೇಜಸ್ವಿನಿ, ಚಪ್ಪರಮಣಿ ಸೇರಿ ಶಿಕ್ಷಕರು,ಸಿಬ್ಬಂದಿ ಹಾಜರಿದ್ದರು.