ಬಸ್‌ಗಾಗಿ ಆಗ್ರಹಿಸಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು

| Published : Jul 17 2025, 12:30 AM IST

ಸಾರಾಂಶ

ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬುಧವಾರ ಸುವರ್ಣ ವಿಧಾನಸೌಧದ ಎದುರು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬುಧವಾರ ಸುವರ್ಣ ವಿಧಾನಸೌಧದ ಎದುರು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಬೆಳಗಾವಿ ತಾಲೂಕಿನ ಕೊಂಡಸಕಪ್ಪ ಗ್ರಾಮದ ವಿದ್ಯಾರ್ಥಿಗಳು ಏಕಾಏಕಿ ಪ್ರತಿಭಟನೆ ನಡೆಸಿದ್ದು, ನಮ್ಮೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ರಸ್ತೆಯಲ್ಲಿಯೇ ಪಟ್ಟು ಹಿಡಿದು ಕುಳಿತರು. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲ ಕಾಲ ಬಂದ್ ಆಗಿದ್ದು, ಕಿಲೋಮೀಟರ್ ಗಟ್ಟೆಲೆ ಸಂಚಾರ ದಟ್ಟನೆ ಉಂಟಾಗಿತ್ತು. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ದೌಡಾಯಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಹಲವು ಬಾರಿ ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕೊಂಡಸಕೊಪ್ಪ ಗ್ರಾಮಕ್ಕೆ ಬಸ್ ವ್ಯವಸ್ಥೆಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೆ ತೆರಳಲು ಸಂಕಷ್ಟ ಎದುರಾಗಿದೆ. ಗ್ರಾಮಸ್ಥರಿಗೂ ತೊಂದರೆಯಾಗುತ್ತಿದೆ. ನಮ್ಮೂರಿಗೆ ಬಸ್‌ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ನಿಮ್ಮೂರಿಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಧರಣಿ ಕೈಬಿಟ್ಟರು.