ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಯನ್ನು ಸದಾ ನೆನಪಿನಲ್ಲಿರಿಸಿಕೊಳ್ಳಬೇಕು. ಕಲಿತ ವಿದ್ಯಾಸಂಸ್ಥೆಗೆ ತಾವು ಒಂದಷ್ಟು ಕೊಡುಗೆ ನೀಡಿದರೆ ಅದು ಇತರರಿಗೆ ಪ್ರೇರಣೆಯಾಗುತ್ತದೆ ಎಂದು ಸಂಜಯ ವಿದ್ಯಾ ಕೇಂದ್ರದ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಾಗರ

ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಯನ್ನು ಸದಾ ನೆನಪಿನಲ್ಲಿರಿಸಿಕೊಳ್ಳಬೇಕು. ಕಲಿತ ವಿದ್ಯಾಸಂಸ್ಥೆಗೆ ತಾವು ಒಂದಷ್ಟು ಕೊಡುಗೆ ನೀಡಿದರೆ ಅದು ಇತರರಿಗೆ ಪ್ರೇರಣೆಯಾಗುತ್ತದೆ ಎಂದು ಸಂಜಯ ವಿದ್ಯಾ ಕೇಂದ್ರದ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಅಭಿಪ್ರಾಯಪಟ್ಟರು.

ಇಲ್ಲಿನ ಸಂಜಯ ವಿದ್ಯಾಕೇಂದ್ರದಲ್ಲಿ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಕೊಡುಗೆಯಾಗಿ ನೀಡಿದ್ದ ವಿಶ್ವೇಶ್ವರಯ್ಯ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾವು ಓದುತ್ತಿರುವ ಸಂದರ್ಭದಲ್ಲಿನ ಶೈಕ್ಷಣಿಕ ಕೊರತೆ ತಮ್ಮ ನಂತರದ ವಿದ್ಯಾರ್ಥಿಗಳಿಗೆ ಆಗಬಾರದು ಎನ್ನುವ ಉದ್ದೇಶಕ್ಕೆ ಹಳೆಯ ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ನೀಡಿರುವ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಗೋಡು ತಿಮ್ಮಪ್ಪನವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಸ್ಥಳೀಯ ಯುವಜನರಿಗೆ ತಾಂತ್ರಿಕ ಶಿಕ್ಷಣ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಮಾಡಿದ್ದರು. ಇದೀಗ ಸಾವಿರಾರು ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಕಲಿತು ತಮ್ಮ ಸ್ವಂತ ಕಾಲಿನಲ್ಲಿ ನಿಂತಿದ್ದಾರೆ. ಈ ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗೆ ನೆರವಾಗುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಹಳೆ ವಿದ್ಯಾರ್ಥಿಗಳು ಮುದ್ರಿಸಿ ಹೊರತಂದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಅನುರಾಧ ಕಾಗೋಡು, ಸಂಜಯ ವಿದ್ಯಾಕೇಂದ್ರವನ್ನು ಆಧುನಿಕವಾಗಿ ಸಜ್ಜುಗೊಳಿಸಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಶೈಕ್ಷಣಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ ಪ್ಯಾರಾ ಮೆಡಿಕಲ್ ಸೇರಿ ಬೇರೆಬೇರೆ ಕೋರ್ಸ್ ಆರಂಭಿಸುವ ಚಿಂತನೆ ನಡೆಸಿದೆ ಎಂದು ಹೇಳಿದರು.

ವಿಶ್ವೇಶ್ವರಯ್ಯ ಪುತ್ಥಳಿಯನ್ನು ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅನಾವರಣಗೊಳಿಸಿದರು. ತಿಮ್ಮಪ್ಪನವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದೇವರಾಜ ಎಸ್.ಪಿ. ಅಧ್ಯಕ್ಷತೆ ವಹಿಸಿದ್ದರು. ಡಾ.ವೈ.ವಿಜಯಕುಮಾರ್, ವಿದ್ಯಾಧರ ಸಿ.ಎ., ಪ್ರಭಾಕರ ಕೆ. ಅಮಿನ್ ಇನ್ನಿತರರು ಉಪಸ್ಥಿತರಿದ್ದರು. ಬಾಬುರಾವ್ ಸ್ವಾಗತಿಸಿ, ವಿಜಯ ಕುಮಾರ್ ವಂದಿಸಿದರು.