ಸಾರಾಂಶ
ಗದಗ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕಾದದ್ದು ಆದ್ಯ ಕರ್ತವ್ಯವಾಗಿದೆ. ಉನ್ನತ ಶಿಕ್ಷಣ ಉತ್ತಮ ಉದ್ಯೋಗ, ಉತ್ಕೃಷ್ಟ ಜೀವನ ಎಲ್ಲರ ಬಯಕೆಯಾಗಿದೆ. ಅದೇ ರೀತಿ ದೇಶ ರಕ್ಷಣೆ ದೇಶವಾಸಿಗಳ ಆಹಾರ ಸ್ವಾವಲಂಬನೆ ಬೆಳೆಸುವಂತಹ ಉದ್ಯೋಗ ಮಾಡುವುದು ಕೂಡಾ ಉನ್ನತ ಕಾರ್ಯ.
ಈ ದಿಸೆಯಲ್ಲಿ ಲಾಲ್‌ಬಹದ್ದೂರ ಶಾಸ್ತ್ರೀಜಿಯವರ ಧ್ಯೇಯವಾಕ್ಯ ಜೈ ಜವಾನ ಜೈ ಕಿಸಾನ್ ಎಂಬ ವಿಚಾರ ಅನುಸರಿಸಬೇಕು ಎಂದು ಡಾ. ವೈಸಿ ಪಾಟೀಲ ಹೇಳಿದರು.
ಅವರು ಸ್ಥಳೀಯ ಜಿಸಿಟಿಎಂ ಪಪೂ ಕಾಲೇಜಿನಲ್ಲಿ ಪ್ರಸ್ತಕ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಕಾರ್ಯಕ್ರಮ, ವಿದ್ಯಾರ್ಥಿ ಸಂಚಿಕೆ ಸ್ವಂದನ ಬಿಡುಗಡೆ ಹಾಗೂ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸತತ ಅಧ್ಯಯನದಿಂದ ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಧೀರ ಸಿಪಾಯಿಯಾದ ಜಸ್ವಂತ ಸಿಂಗ್‌ನಂತೆ ದೇಶಸೇವೆ ಮಾಡಬೇಕು. ಇಸ್ರೇಲ್‌ದ ಮಾಜಿ ಪ್ರಧಾನಿ ಗೋಲ್ಡಾ ಮೇರ್‌ನಂತೆ ದೃಢತೆ ಹಾಗೂ ಛಲದ ದೇಶಾಭಿಮಾನಿಯಾಗಿರಬೇಕು.
ಪಿಲೇಯಂತಹ ಪ್ರಬಲ ಫುಟಬಾಲ್ ಆಟಗಾರನಾಗಬೇಕು. ಅಂತಹ ಪ್ರಬಲ ಆಟಗಾರನನ್ನು ಛಲ ಹಾಗೂ ಕ್ರಿಯಾಶೀಲ ರೀತಿಯಲ್ಲಿ ಸೋಲಿಸಿದ ಡಿಯೋಗಾ ಮರಡೋನಾ ನಂತಹ ಆಟಗಾರನಾಗಬೇಕು. ವಿದ್ಯಾರ್ಥಿಗಳು ನಿಷ್ಠೆ, ಛಲ ಬೆಳೆಸಿಕೊಳ್ಳಬೇಕೆಂದರು.
ಶೈಕ್ಷಣಿಕ ಸಲಹಾ ಸಮಿತಿ ಚೇರಮನ್ನ ದತ್ತಪ್ಪಗೌಡ ಓದುಗೌಡರ ಮಾತನಾಡಿ, ಪ್ರತಿಯೊರ್ವ ವ್ಯಕ್ತಿ ತಾನು ಯಾರು ತನ್ನ ಉದ್ದೇಶವೇನು ಹಾಗೂ ಕರ್ತವ್ಯಗಳೇನು ಎಂದು ಅರಿತು ಕಾರ್ಯ ಪ್ರವೃತರಾಗಬೇಕು. ಉತ್ತಮ ಹವ್ಯಾಸ ಸತತ ಅಭ್ಯಾಸ ಹಾಗೂ ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾ. ಎಸ್.ಎ.ದೇಶಪಾಂಡೆ ಮಾತನಾಡಿದರು. ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ ವರದಿಯನ್ನು ಮಹಾಲಕ್ಷ್ಮೀ ಕಮ್ಮಾರ ವಾಚಿಸಿದರು. ಬಹುಮಾನ ವಿತರಣೆ ಕಾರ್ಯನಿರ್ವಹಣೆಯನ್ನು ಪೂಜಾ ಪಾಟೀಲ, ಸಂಜನಾ ಹೂಗಾರ ನಡೆಸಿಕೊಟ್ಟರು.
ಕ್ರೀಡಾ ವರದಿಯನ್ನು ಪಾರ್ವತಿ ಬಳ್ಳೊಳ್ಳಿ ಓದಿದರು. ವಿದ್ಯಾರ್ಥಿಗಳ ಪರವಾಗಿ ಪಾರ್ವತಿ ಬಳ್ಳೊಳ್ಳಿ ಹಾಗೂ ಮಲ್ಲಿಕಾರ್ಜುನ ಪಲ್ಲೇದ ತಮ್ಮ ಅನಿಸಿಕೆ ಹಂಚಿಕೊಂಡರು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಪುರಸ್ಕಾರ ವಿತರಿಸಿದರು.
ಪ್ರಧಾನ ಕಾರ್ಯದರ್ಶಿ ಮಾಬೂಬಿ ಭದ್ರಾಪೂರ ಸ್ವಾಗತಿಸಿದರು. ಪವಿತ್ರಾ ಹಾಳದೋಟದ ಪರಿಚಯಿಸಿದರು. ಸೃಷ್ಟಿ ಉಳ್ಳಾಗಡ್ಡಿ ವಂದಿಸಿದರು. ಶ್ರೀದೇವಿ ಮರಿಗೌಡ್ರ ಹಾಗೂ ಕೀರ್ತಿ ಶೆಟ್ಟರ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಮನರಂಜನಾ ಕಾರ್ಯಕ್ರಮಗಳು ಜರುಗಿದವು.