ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ

| Published : Mar 04 2024, 01:22 AM IST

ಸಾರಾಂಶ

ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪಸಮನ್ವಯ ಯೋಜನಾಧಿಕಾರಿ ಎಂ.ಎಚ್ ಕಂಬಳಿ ಹೇಳಿದರು.

ಗದಗ: ದಿನನಿತ್ಯ ಜೀವನದಲ್ಲಿ ಜರುಗುವ ಚಿಕ್ಕ ಚಿಕ್ಕ ಸಂಗತಿಗಳಲ್ಲಿ ವಿಜ್ಞಾನವಿರುತ್ತದೆ. ಅದನ್ನು ಆಳವಾಗಿ ಅಧ್ಯಯನ ಮಾಡಿ ಅದರಲ್ಲಿರುವ ವೈಜ್ಞಾನಿಕ ಮನೋಭಾವನೆಯನ್ನು ಬಾಲ್ಯದಲ್ಲೇ ಅರ್ಥಮಾಡಿಕೊಂಡಾಗ ವಿಜ್ಞಾನ ಅರ್ಥವಾಗುತ್ತದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪಸಮನ್ವಯ ಯೋಜನಾಧಿಕಾರಿ ಎಂ.ಎಚ್ ಕಂಬಳಿ ಹೇಳಿದರು. ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.2ರಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂಗವಾಗಿ ಏರ್ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ವಿಜ್ಞಾನ ವಿಷಯವು ಒಂದು ವಿಸ್ಮಯ ಹಾಗೂ ಕುತೂಹಲಕಾರಿಯಾದ ವಿಷಯವಾಗಿದೆ ಎಂದರು. ಈ ಕುತೂಹಲವನ್ನು ಅರಿಯಬೇಕಾದರೆ ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನದಿಂದ ಪ್ರತಿಯೊಂದು ಸಂಗತಿಯನ್ನು ಅಧ್ಯಯನ ಮಾಡಿದಾಗ ವಿಷಯ ಮನದಟ್ಟಾಗುತ್ತದೆ. ಎಲ್ಲ ವಿಚಾರದಲ್ಲೂ ವಿಜ್ಞಾನದ ಅಂಶಗಳನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು ಹಾಗೂ ಪ್ರತಿಯೊಂದನ್ನೂ ಏಕೆ, ಹೇಗೆ, ಯಾವಾಗ, ಎಲ್ಲಿ ಎಂಬ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಿಮ್ಮ ಮುಂದಿನ ಜೀವನವು ಉಜ್ವಲವಾಗುವುದರೊಂದಿಗೆ ಜ್ಞಾನವಂತರಾಗಿ ಜೀವನ ನಡೆಸಲು ಸಹಾಯಕಾರಿಯಾಗುತ್ತದೆ ಎಂದರು.

ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೌರವ್ಯೂಹ, ಆಮ್ಲಜನಕದ ಪ್ರಯೋಜನ, ಮಾದರಿ ಗಣಕಯಂತ್ರ, ಮಾಯಾಮಳೆ, ವಸ್ತುವಿನ ಮೇಲ್ಮುಖ ಒತ್ತಡ, ಮಾಯಾ ಬಲೂನ್, ಶಾಖದ ವರ್ಗಾವಣೆ ಮುಂತಾದ ವಿಷಯಗಳ ಕುರಿತು ಮಾದರಿಗಳನ್ನು ಪ್ರದರ್ಶಿಸಿ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಎಂ.ವ್ಹಿ. ಹವಾಲ್ದಾರ್, ಪ್ರಕಾಶ ಮಂಗಳೂರ, ಮುಖ್ಯೋಪಾಧ್ಯಾಯಿನಿ ಎಫ್.ಜೆ. ದಲಬಂಜನ ಉಪಸ್ಥಿತರಿದ್ದರು. ವ್ಹಿ.ಎಸ್. ಕಬ್ಬರಗಿ ಸ್ವಾಗತಿಸಿದರು. ವೀಣಾ ಪಾಟೀಲ ವಂದಿಸಿದರು. ನಾಗನೂರ ನಿರೂಪಿಸಿದರು.