ಚನ್ನಪಟ್ಟಣ: ನೀವು ಕಲಿತ ವಿದ್ಯೆಯನ್ನು ನಿಮ್ಮಿಂದ ಯಾರೂ ಕದಿಯಲಾಗದು, ಆದ್ದರಿಂದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವಿದ್ಯೆ ಮತ್ತು ಜ್ಞಾನ ಪಡೆಯಲು ಶ್ರದ್ಧೆಯಿಂದ ಕಲಿಯಬೇಕು ಎಂದು ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಸಲಹೆ ನೀಡಿದರು
ಚನ್ನಪಟ್ಟಣ: ನೀವು ಕಲಿತ ವಿದ್ಯೆಯನ್ನು ನಿಮ್ಮಿಂದ ಯಾರೂ ಕದಿಯಲಾಗದು, ಆದ್ದರಿಂದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವಿದ್ಯೆ ಮತ್ತು ಜ್ಞಾನ ಪಡೆಯಲು ಶ್ರದ್ಧೆಯಿಂದ ಕಲಿಯಬೇಕು ಎಂದು ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಸಲಹೆ ನೀಡಿದರು.
ಬೇವೂರು ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಯ ೨೦೦೪-೨೦೦೫ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳಿಂದ ನವೀಕರಣಗೊಂಡಿರುವ ಶಾಲಾ ಕೊಠಡಿಗಳ ಉದ್ಘಾಟನೆ ಮತ್ತು ದಾನಿಗಳಿಂದ ನಿರ್ಮಿಸಿರುವ ನೂತನ ಶೌಚಾಲಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇಂದು ಎಲ್ಲಾ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದು, ಕಿರುಬೆರಳಿನಲ್ಲಿ ಪ್ರಪಂಚ ತೋರುವ ಸಾಧನವಾಗಿದೆ. ಇದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆ ಮಾಡುತ್ತಿರುವುದು ಶಿಕ್ಷಣದಲ್ಲಿನ ಮೌಲ್ಯ ಕಡಿಮೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ ಜ್ಞಾನ ಹೆಚ್ಚಿಸಿಕೊಳ್ಳಲು ಸದ್ಬಳಕೆ ಮಾಡಿಕೊಳ್ಳಬೇಕು. ಸಮಯವನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಇದು ಕಲಿಕೆಯ ಸಮಯವಾಗಿದೆ. ಈ ಸಮಯದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು ಜ್ಞಾನಾರ್ಜನೆ ಸಂಪಾದಿಸಿಕೊಂಡರೆ ಪ್ರಪಂಚದ ಯಾವುದೇ ಮೂಲೆಗೆ ಹೋದರೂ ನೀವು ನಿಮ್ಮ ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ತೌಟನಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ನಾನಿಂದು ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ಗುರುತಿಸಿಕೊಳ್ಳುವಷ್ಟು ಮಟ್ಟಿಗೆ ಬೆಳೆದಿದ್ದೇನೆ. ಅದಕ್ಕೆ ಈ ಶಿಕ್ಷಣ ಸಂಸ್ಥೆಯಲ್ಲಿನ ಗುರುಗಳು ಕಲಿಸಿಕೊಟ್ಟ ಮಾನವೀಯ ಮೌಲ್ಯಗಳು ಮತ್ತು ಗುರುಗಳು ಹಾಕಿಕೊಟ್ಟ ಮಾರ್ಗದರ್ಶನ ಕಾರಣವಾಗಿದೆ. ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.ಸಂಸ್ಥೆ ನಿವೃತ್ತ ಉಪ ಪ್ರಾಂಶುಪಾಲ ಟಿ.ಆರ್.ರಂಗಸ್ವಾಮಿ ಮಾತನಾಡಿ, ಶಿಕ್ಷಣದ ಮೌಲ್ಯ ಮತ್ತು ಸಂಸ್ಕಾರ ಕಲಿತವರು ಮುಂದೆ ಬರುತ್ತಾರೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಇಂದು ಶಿಕ್ಷಣ ಕಲಿತ ಸಂಸ್ಥೆಯ ಕೊಠಡಿಗಳ ನಿರ್ಮಾಣಕ್ಕೆ ಸಹಕರಿಸುತ್ತಿರುವುದು ದೊಡ್ಡ ಕಾಣಿಕೆಯಾಗಿದೆ. ಹಸಿದ ಹೊಟ್ಟೆಗೆ ಅನ್ನ ಹಾಕಿದವರು, ವಿದ್ಯೆ ಕಲಿಸಿಕೊಟ್ಟ ಗುರುಗಳನ್ನು ನೆನೆಯಬೇಕು. ಆದರೆ ಇಂದು ವಿದ್ಯೆಯ ಮೌಲ್ಯ ಕಡಿಮೆ ಆಗುತ್ತಿದೆ. ಶಿಸ್ತುಬದ್ದ ಶಿಕ್ಷಣ ಇಲ್ಲವಾಗಿದೆ. ಪಠ್ಯಕ್ರಮಕ್ಕೆ ಶಿಕ್ಷಣ ಸೀಮಿತವಾಗಿದೆ ಎಂದು ವಿಷಾದಿಸಿದರು.
ಸಂಸ್ಥೆಯ ನಿವೃತ್ತ ಶಿಕ್ಷಕದ ಸಿ.ಚೆನ್ನಪ್ಪ ಮಾತನಾಡಿ, ನಾವು ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಪಾಠ ಕಲಿಸುತ್ತಿದ್ದೆವು. ತಪ್ಪು ಮಾಡಿದಾಗ ದಂಡಿಸುತ್ತಿದ್ದೆವು. ಆದರೆ ಇಂದು ವಿದ್ಯಾರ್ಥಿಗಳನ್ನು ದುರುಗುಟ್ಟಿ ನೋಡಿದರೂ ಶಿಕ್ಷಕರ ಮೇಲೆ ದೂರು ನೀಡುವ ಪರಿಸ್ಥಿತಿ ಇದೆ. ಶಿಕ್ಷಕರು ಎಂದರೆ ಹಣ ಪಡೆದು ಪಾಠ ಮಾಡುವವರು ಎಂಬ ಪರಿಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡುವ ಜೊತೆಗೆ ಗುರುಗಳನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದರು.ಇದೇ ವೇಳೆ ಸಂಸ್ಥೆಗೆ ಶೌಚಾಲಯ ನಿರ್ಮಾಣ ಮಾಡಿಸಿಕೊಟ್ಟ ದಾನಿಗಳಾದ ಮಾ ಕಾಮಾಕ್ಯ ಇನೋವೇಟಿವ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ದಿಲೀಪ್‌ಕುಮಾರ್ ಭಾರತಿ ಹಾಗೂ ಅರ್ಚನ ಭಾರತಿ, ವಿದ್ಯಾಸಾಗರ್ ಅವರನ್ನು ಸಂಸ್ಥೆಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದೊಡ್ಡಮಾದೇಗೌಡ, ಉಪಾಧ್ಯಕ್ಷ ಜಿತೇಂದ್ರ ಕುಮಾರ್, ಖಜಾಂಚಿ ಮನು, ನಿರ್ದೇಶಕರಾದ ನವೀನ್ ಕುಮಾರ್, ಶಿವಕುಮಾರ್, ಚೇತನ್, ನಾಗಣ್ಣ, ಕೆಂಪರಾಜು, ಪ್ರಾಂಶುಪಾಲರಾದ ಡಿ.ಸಿ ಸುರೇಶ್, ಉಪ ಪ್ರಾಂಶುಪಾಲರಾದ ಗೌರಮ್ಮ, ಮುಖ್ಯ ಶಿಕ್ಷಕ ಹನುಮಂತು ಇತರರಿದ್ದರು.ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಸಿ.ಸಿ.ಚೆನ್ನಪ್ಪ, ಶೇಖರ್, ಪುಟ್ಟಮರಿಗೌಡ, ಟಿ.ಆರ್ ರಂಗಸ್ವಾಮಿ, ಕೆಂಪೇಗೌಡ, ಬಿ.ಸಿ ರಮೇಶ್, ಪುಟ್ಟಸ್ವಾಮಿ, ಬಿಎಸ್ ಶ್ರೀಧರ್, ಸಿದ್ದೇಗೌಡ, ಕೆ ಎಸ್ ಶಿವಣ್ಣ, ಕಮಲಮ್ಮ ಪುಟ್ಟಸ್ವಾಮಿ, ಇಂದ್ರಮ್ಮ ಶಿವರಾಜು, ಕರ್ನೆ ಸುಭಾಕರ್, ನೌಕರರಾದ ನರಸಿಂಹಮೂರ್ತಿ ಸಿದ್ದಯ್ಯ, ಸಿದ್ದಯ್ಯ ಅವರನ್ನು ಅಭಿನಂದಿಸಲಾಯಿತು.
ಪೊಟೋ೪ಸಿಪಿಟಿ೨:ಚನ್ನಪಟ್ಟಣ ತಾಲೂಕಿನ ಬೇವೂರು ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಯ ೨೦೦೪-೨೦೦೫ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.