ಶುಶ್ರೂಷಕ ವೃತ್ತಿಯನ್ನು ವಿದ್ಯಾರ್ಥಿಗಳು ಗೌರವದಿಂದ ಸ್ವೀಕರಿಸಿ

| Published : Apr 10 2025, 01:03 AM IST

ಶುಶ್ರೂಷಕ ವೃತ್ತಿಯನ್ನು ವಿದ್ಯಾರ್ಥಿಗಳು ಗೌರವದಿಂದ ಸ್ವೀಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶುಶ್ರೂಷಕ ವೃತ್ತಿ ಸೇವೆಯ ಜತೆಗೆ ಆತ್ಮ ತೃಪ್ತಿ ನೀಡುವ ವೃತ್ತಿಯಾಗಿದ್ದು, ನರ್ಸಿಂಗ್‌ ವಿದ್ಯಾರ್ಥಿಗಳು ವೃತ್ತಿಯನ್ನು ಗೌರವದಿಂದ ಸ್ವೀಕರಿಸಬೇಕು ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಡೀನ್ ಡಾ.ಎಂ.ಎಲ್.ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶುಶ್ರೂಷಕ ವೃತ್ತಿ ಸೇವೆಯ ಜತೆಗೆ ಆತ್ಮ ತೃಪ್ತಿ ನೀಡುವ ವೃತ್ತಿಯಾಗಿದ್ದು, ನರ್ಸಿಂಗ್‌ ವಿದ್ಯಾರ್ಥಿಗಳು ವೃತ್ತಿಯನ್ನು ಗೌರವದಿಂದ ಸ್ವೀಕರಿಸಬೇಕು ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಡೀನ್ ಡಾ.ಎಂ.ಎಲ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರೆಶರ್ಸ್ ಫೆಸ್ಟ್ ಕಾರ್ಯಕ್ರಮದಲ್ಲಿ ಶುಶ್ರೂಷಕಿ ಫ್ಲಾರೆನ್ಸ್‌ ನೈಟಿಂಗೆಲ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಆಧುನಿಕ ಆಸ್ಪತ್ರೆಗಳ ಜೊತೆಗೆ ಪರಿಣಿತ ಮತ್ತು ಸಂವೇದನಾಶೀಲ ಶುಶ್ರೂಷಕರಿಂದ ಮಾತ್ರ ದೇಶದ ಆರೋಗ್ಯ ವ್ಯವಸ್ಥೆ ಉನ್ನತಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ರೋಗಿಯ ಆರೈಕೆ ಮತ್ತು ಕರ್ತವ್ಯ ನಿಷ್ಠೆ ಉಳ್ಳವರಾದಾಗ ಮಾತ್ರ ವೃತ್ತಿಗೆ ಗೌರವ ದೊರಕಿಸಿಕೊಟ್ಟಂತಾಗುತ್ತದೆ. ತರಬೇತಿಯಲ್ಲಿ ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಮಾನವೀಯ ಮೌಲ್ಯಗಳ ಮಹತ್ವ ಅರಿತು ಪಾಲಿಸಬೇಕು. ಶುಶ್ರೂಷಕರು ವೈದ್ಯರಿಗಿಂತ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ರೋಗಿಗೆ ಹತ್ತಿರವಾಗಿ ಅವರ ಯೋಗ ಕ್ಷೇಮ ನೋಡಿಕೊಳ್ಳುವ ಜತೆಗೆ ಮಹತ್ವದ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ಈ ವೃತ್ತಿ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಉಪಯೋಗಿಸಿಕೊಳ್ಳಿ. ವೃತ್ತಿ ಮೇಲ್ನೋಟಕ್ಕೆ ಕಠಿಣ ಎನಿಸಿದರೂ ಇದರಲ್ಲಿ ದೊರೆಯುವ ಸಂತೃಪ್ತಿ ಇತರೆ ವೃತ್ತಿಗಳಲ್ಲಿ ದೊರೆಯಲು ಸಾಧ್ಯವಿಲ್ಲ, ಉದ್ಯೋಗದ ಜತೆ ಸೇವೆ ಮತ್ತು ಸಮರ್ಪಣಾ ಭಾವ ಉಳ್ಳವರಾದರೆ ಯಶಸ್ಸು ಮತ್ತು ಕೀರ್ತಿ ಲಭಿಸಲಿದೆ. ಫ್ಲಾರೆನ್ಸ್‌ ನೈಟಿಂಗೆಲ್‌, ಮದರ್‌ ತೆರೆಸಾ, ಹೆಲೆನ್ ಕೆಲ್ಲರ್‌ ಮುಂತಾದ ಮಹಾನ್‌ ಚೇತನಗಳ ತತ್ವ, ಸಿದ್ಧಾಂತ ಹಾಗೂ ಕಾರ್ಯ ನಿಮಗೆ ಸದಾ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ಒಂದು ದೇಶದ ಭವಿಷ್ಯಕ್ಕೆ ಆರೋಗ್ಯಕರ ಜನಾಂಗವನ್ನು ರೂಪಿಸುವ ನೈತಿಕ ಹೊಣೆ ಶುಶ್ರೂಷಕರ ಮೇಲಿದ್ದು, ಈ ಹುದ್ದೆಯ ಮೌಲ್ಯ ಮತ್ತು ಗೌರವವನ್ನು ನಿರಂತರ ಉನ್ನತ ಸ್ಥಾನದಲ್ಲಿ ಕಾಣಲು ನಾವೆಲ್ಲರೂ ಮುಂದಾಗೊಣ ಎಂದು ತಿಳಿಸಿದರು.

ಭಾರತೀಯ ಶುಶ್ರೂಷಕ ಸಮುದಾಯವು ತಮ್ಮ ಜ್ಞಾನ, ಕೌಶಲ್ಯ, ಕಾರುಣ್ಯ ಮತ್ತು ಸೇವಾ ನೆಲೆಯಲ್ಲಿ ಉತ್ತಮ ಹೆಸರು ಪಡೆದಿದ್ದು, ಭಾರತೀಯ ಶುಶ್ರೂಷಕರಿಗೆ ಜಗತ್ತಿನೆಲ್ಲೆಡೆ ಅವಕಾಶಗಳಿವೆ. ಕೋವಿಡ್ 19ರ ಸಂದರ್ಭದಲ್ಲಿ ನಮ್ಮ ವೈದ್ಯ ಮತ್ತು ನರ್ಸಿಂಗ್ ಸಮುದಾಯವು ಹಗಲು ರಾತ್ರಿಯೆನ್ನದೆ ತಮ್ಮ ಪ್ರಾಣ ಒತ್ತೆ ಇಟ್ಟು ಕುಟುಂಬಗಳ ಸದಸ್ಯರ ಮತ್ತು ಮಕ್ಕಳ ಮುಖ ನೋಡದೆ ಸಲ್ಲಿಸಿರುವ ಸೇವೆಯನ್ನು ಸಮಾಜ ಎದೆತುಂಬಿ ಆಭಿಮಾನಿಸಿದೆ. ಆದ್ದರಿಂದ ನರ್ಸಿಂಗ್ ಸೇವೆಗೆ ಬೆಲೆಕಟ್ಟಲಾಗುವುದಿಲ್ಲ. ಇಂತಹ ದೂರದೃಷ್ಟಿಯಿಂದ ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಭೌದ್ಧಿಕ ಉನ್ನತಿ, ಕೌಶಲ್ಯ, ಸಂವಹನ, ಸಹನೆ ಮತ್ತು ಕಾಳಜಿಯುಳ್ಳ ಸೇವಾಗುಣಗಳನ್ನು ನಿರಂತರ ಅಧ್ಯಯನ ಮತ್ತು ಸೇವೆಯಿಂದ ಮಾತ್ರ ಕಟ್ಟಿಕೊಳ್ಳಲು ಸಾಧ್ಯವೆಂದು ಕಿವಿಮಾತು ಹೇಳಿದರು.

ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವಿಭಾಗ ಮುಖ್ಯಸ್ಥರಾದ ಡಾ.ಎಂ.ಆರ್.ಅನಿತ, ಡಾ.ಸುರೇಶ್ ನಾಯಕ್, ಡಾ.ಎಸ್.ಎಚ್.ಗೀತಾ, ಡಾ.ಸಿ.ಎಸ್.ನಾಗಲಕ್ಷ್ಮೀ, ಕಾಲೇಜಿನ ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶಾಂತಿ, ಉಪಪ್ರಾಂಶುಪಾಲರಾದ ಪದ್ಮಾವತಿ, ಉಪನ್ಯಾಸಕರಾದ ಸಮೀಉಲ್ಲಾ, ವಿಶಾಲಾಕ್ಷಿ, ನರ್ಸಿಂಗ್ ವಿದ್ಯಾರ್ಥಿಗಳು, ಪೋಷಕರು ಇದ್ದರು.