ಸಾರಾಂಶ
ಶಿಕ್ಷಣ ಎಂಬುದು ನಮ್ಮ ಬುದ್ಧಿಶಕ್ತಿ ಸುಧಾರಿಸುತ್ತದೆ ಮತ್ತು ಜಗತ್ತನ್ನು ಗೆಲ್ಲಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನದೊಂದಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ
ಯಲಬುರ್ಗಾ: ಪ್ರತಿ ವಿದ್ಯಾರ್ಥಿಗಳು ತಮ್ಮಲ್ಲಿರುವ ತಪ್ಪು ತಿಳಿವಳಿಕೆ, ಭಯ, ಆತಂಕ ಬಿಟ್ಟು ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಎಸ್.ಎನ್.ಎಸ್.ಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಆಯೋಜಿಸಿದ್ದ ವಿಶೇಷ ತರಗತಿ (ಟ್ಯೂಷನ್ ಕ್ಲಾಸ್) ಸಮಾರೋಪ ಸಮಾರಂಭ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಣ ಎಂಬುದು ನಮ್ಮ ಬುದ್ಧಿಶಕ್ತಿ ಸುಧಾರಿಸುತ್ತದೆ ಮತ್ತು ಜಗತ್ತನ್ನು ಗೆಲ್ಲಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನದೊಂದಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ. ಹಾಗೇ ಶಿಕ್ಷಣ ಎಂಬುದು ನಮಗೆ ಯಶಸ್ಸನ್ನು ಸಾಧಿಸಲು ಮತ್ತು ಪರಾನುಭೂತಿಯ ಮಸೂರದ ಮೂಲಕ ಜಗತ್ತನ್ನು ಗ್ರಹಿಸುವ ಸಾಮರ್ಥ್ಯ ಮಾಡಿಕೊಡುತ್ತದೆ ಎಂದರು.
ಮಾ.21 ರಿಂದ ಜರುಗುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರಕ್ಕೆ ತಾವು ಯಾವುದೇ ಭಯ ಭೀತರಾಗದೇ ಆಗಮಿಸಿ ಪರೀಕ್ಷೆ ಬರೆಯಬೇಕು. ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳಬಾರದು. ಹಾಗೇ ತಮ್ಮ ಸಹೋದರರು ಹಾಗೂ ಸಂಬಂಧಿಕರನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ಯಾವುದೇ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿ ಕೊಡಬಾರದು. ಪರೀಕ್ಷಾ ಕೇಂದ್ರಕ್ಕೆ ಮತ್ತು ತಮಗೆ ಕೆಟ್ಟ ಹೆಸರು ಬಾರದಂತೆ ಜಾಗೃತಿ ವಹಿಸಬೇಕು ಎಂದು ಹೇಳಿದರು.ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸತೀಶ್ ಮಾತನಾಡಿ, ಪ್ರಸ್ತಕ ಸಾಲಿನಲ್ಲಿ ₹೨.೮೦.ಕೋಟಿ ವೆಚ್ಚದಲ್ಲಿ ರಾಜ್ಯದ ೨೦ಸಾವಿರ ಶಾಲೆಯಲ್ಲಿ ವಿಶೇಷ ತರಗತಿ (ಟ್ಯೂಷನ್ ಕ್ಲಾಸ್) ನಡೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸರಳವಾಗಿ ಎದುರಿಸಲು ಅನುಕೂಲವಾಗಲಿ ಎಂಬ ಉದ್ದೇಶ ಹೊಂದಲಾಗಿದೆ. ಈ ಕಾರಣದಿಂದ ಸಂಸ್ಥೆಯ ಶಿಕ್ಷಣ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.
ಈ ವೇಳೆಯಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಈರಪ್ಪ ಕುಡಗುಂಟಿ, ಉಪಾಧ್ಯಕ್ಷ ಮುತ್ತಣ್ಣ ದೇಸಾಯಿ, ಸದಸ್ಯರಾದ ಹಾಲಪ್ಪ ಚವಡಿ, ಸೂಗೀರಪ್ಪ ಬಳಿಗೇರ, ಶಾಲೆಯ ಮುಖ್ಯಶಿಕ್ಷಕ ಸುರೇಶ ವೇದಪಾಠಕ, ಈರಪ್ಪ ಅಂಗಡಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಗೀತಾ, ವಲಯ ಮೇಲ್ವಿಚಾರಕಿ ಚನ್ನಮ್ಮ, ಸೇವಾ ಪ್ರತಿ ನಿಧಿ ಸಂಗನಗೌಡ ರಾಮಡಗಿ, ಒಕ್ಕೂಟದ ಅಧ್ಯಕ್ಷೆ ಗೀತಾ ಕೀರ್ದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಇದ್ದರು.