ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

| Published : Jan 08 2024, 01:45 AM IST

ಸಾರಾಂಶ

ಚನ್ನಪಟ್ಟಣ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯದಿಂದ ನೋಡದೇ ಖುಷಿಯಿಂದ ಎದುರಿಸಬೇಕು. ಹೇಗೆ ಸಂತಸದಿಂದ ಪ್ರವಾಸಕ್ಕೆ ತೆರಳುತ್ತೀರೋ ಅದೇ ರೀತಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಬೇಕು ಎಂದು ವ್ಯಕ್ತಿತ್ವ ವಿಕಸನ ತಜ್ಞ ಹಾಗೂ ಪರಿವರ್ತನ ವಸತಿ ಶಾಲೆಯ ಸಂಸ್ಥಾಪಕ ಆರ್.ಎ.ಚೇತನ್‌ರಾಮ್ ಕಿವಿಮಾತು ಹೇಳಿದರು.

ಚನ್ನಪಟ್ಟಣ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯದಿಂದ ನೋಡದೇ ಖುಷಿಯಿಂದ ಎದುರಿಸಬೇಕು. ಹೇಗೆ ಸಂತಸದಿಂದ ಪ್ರವಾಸಕ್ಕೆ ತೆರಳುತ್ತೀರೋ ಅದೇ ರೀತಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಬೇಕು ಎಂದು ವ್ಯಕ್ತಿತ್ವ ವಿಕಸನ ತಜ್ಞ ಹಾಗೂ ಪರಿವರ್ತನ ವಸತಿ ಶಾಲೆಯ ಸಂಸ್ಥಾಪಕ ಆರ್.ಎ.ಚೇತನ್‌ರಾಮ್ ಕಿವಿಮಾತು ಹೇಳಿದರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ತಾಲೂಕು ಶಿಕ್ಷಣ ಇಲಾಖೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ರೇಷ್ಮೆ ನಾಡು ಕ್ರೀಡಾ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ನಿವಾರಣೆ ಮಾಡಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವರ್ಷವಿಡಿ ಪಾಠ ಕೇಳಿ ತಯಾರಿ ನಡೆಸುವ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ ತೀವ್ರ ಒತ್ತಡಕ್ಕೆ ಒಳಗಾಗುತ್ತಾರೆ. ವರ್ಷವಿಡೀ ಓದಿರುವುದನ್ನು ಮೂರು ಗಂಟೆಯಲ್ಲಿ ಬರೆಯುವ ಆತಂಕದಿಂದ ಎಲ್ಲವನ್ನೂ ಮರೆಯುತ್ತಾರೆ. ಪರೀಕ್ಷೆ ಎನ್ನುವುದು ಹಲವರಿಗೆ ರಣರಂಗದಂತೆ ಭಾಸವಾಗುತ್ತೆ. ಈ ಮನೋಭಾವನೆ ಬದಲಾಗಬೇಕು. ಪರೀಕ್ಷೆಯನ್ನು ಖುಷಿಯಿಂದ ಎದುರಿಸಬೇಕು. ಕೆಲವು ಸರಳ ಸೂತ್ರಗಳನ್ನು ಪಾಲಿಸಿದರೆ ಪರೀಕ್ಷೆ ಎನ್ನುವುದು ಹಬ್ಬವಾಗುತ್ತದೆ ಎಂದು ತಿಳಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಪರೀಕ್ಷೆಗಳು ಹತ್ತಿರವಾದಂತೆ ಹೆಚ್ಚು ಅಂಕ ಪಡೆಯುವಂತೆ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು, ಪೋಷಕರು ಒತ್ತಡ ಹೇರುತ್ತಾರೆ. ಇದು ವಿದ್ಯಾರ್ಥಿಗಳ ಮಾನಸಿಕ ತೊಳಲಾಟಕ್ಕೆ ಕಾರಣವಾಗುತ್ತೆದೆ. ಒಂದು ವರ್ಷದಿಂದ ಕಲಿತ ಪಠ್ಯಾಕ್ರಮಗಳನ್ನು ಮರೆತು ಕಿನ್ನತೆಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಒತ್ತಡ ಹಾಕಬಾರದು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಆಟದಂತೆ ತೆಗೆದುಕೊಳ್ಳಬೇಕು. ಆಗ ಕೇವಲ ಪರೀಕ್ಷೆ ಮಾತ್ರವಲ್ಲ, ಬದುಕು ಕೂಡ ಆಪ್ಯಾಯಮಾನವಾಗುತ್ತದೆ ಎಂದರು.

ಸಿಕೆಸಿ ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪಕ ಡಾ.ಚಿಕ್ಕಕೊಮ್ಮಾರಿಗೌಡ ಮಾತನಾಡಿ, ವಿದ್ಯಾರ್ಥಿಗಳು ಆರಂಭದಿಂದ ಉತ್ತಮವಾಗಿಯೇ ಪಾಠಗಳನ್ನು ಆಲಿಸಿ ಉತ್ತಮ ಅಂಕ ಗಳಿಸುತ್ತಾರೆ. ಆದರೆ ಮುಖ್ಯ ಪರೀಕ್ಷೆಯಲ್ಲಿ ಕೊಂಚ ಒತ್ತಡಕ್ಕೆ ಒಳಗಾಗುತ್ತಾರೆ. ವಿದ್ಯಾರ್ಥಿಗಳು ಪ್ರೆಸಂಟೇಷನ್‌ನ ಮಹತ್ವ ಅರಿತುಕೊಳ್ಳಬೇಕು. ಹೇಗೆ ಬರೆದರೆ ಮೌಲ್ಯಮಾಪಕರು ಹೆಚ್ಚು ಅಂಕ ನೀಡುತ್ತಾರೆ ಎಂಬುದನ್ನು ಅರಿತು ಅದರಂತೆ ಸರಳವಾಗಿ ಬರೆಯಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಮರೀಗೌಡ ಮಾತನಾಡಿ, ಪಠ್ಯಪುಸ್ತಕ ತಾಯಿ ಇದ್ದಂತೆ ಸಾಕಷ್ಟು ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ಓದುವುದೇ ಇಲ್ಲ. ನೋಟ್ಸ್, ಗೈಡ್‌ಗಳನ್ನೇ ಬಾಯಿಪಾಠ ಮಾಡುತ್ತಾರೆ. ಇದರಿಂದ ಓದುವ ವಿಷಯ ನಮ್ಮದಾಗುವುದಿಲ್ಲ. ಒಂದು ಅಂಕಕ್ಕೆ ಒಂದು ಪುಟ ಬರೆದರೆ ಪ್ರಯೋಜನವಿಲ್ಲ. ಪರೀಕ್ಷೆಯಲ್ಲಿ ಎಷ್ಟು ಬರೆಯಬೇಕು ಎನ್ನುವುದು ಕೂಡ ಮುಖ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಗಿರೀಶ್, ಹಿರಿಯ ವಕೀಲರಾದ ಲಕ್ಷ್ಮಣ್, ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಮೋಹನ್, ಯೋಗಾಶಿಕ್ಷಕಿ ರಾಧಿಕಾ ರವಿಕುಮಾರ್‌ಗೌಡ, ಡಾ. ಶಂಕರ್, ಸುಜೇಂದ್ರ ಬಾಬು, ನಿವೃತ್ತ ಉಪ ಪ್ರಾಂಶುಪಾಲ ಟಿ.ಆರ್. ರಂಗಸ್ವಾಮಿ, ಶಿಕ್ಷಕ ಸಂಯೋಜಕ ಗಂಗಾಧರ್, ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಇತರರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಶಾಲೆಗಳ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪೋಟೊ೭ಸಿಪಿಟಿ೮: ಚನ್ನಪಟ್ಟಣದಲ್ಲಿ ತಾಲೂಕು ಶಿಕ್ಷಣ ಇಲಾಖೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ರೇಷ್ಮೆ ನಾಡು ಕ್ರೀಡಾ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಕಾರ್ಯಾಗಾರ ನಡೆಯಿತು.