ಸಾರಾಂಶ
ಸಂಡೂರು: ಪಟ್ಟಣದ ಎಸ್.ಇ.ಎಸ್ ಬಾಲಕಿಯರ ಪ್ರೌಢಶಾಲೆಯ (ಅನುದಾನಿತ) ಪ್ರಭಾರಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕಲ್ಲಯ್ಯ ಸಿದ್ದಯ್ಯ ಮಠ್ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.
ರಾಜ್ಯಶಾಸ್ತ್ರ ಹಾಗೂ ಕನ್ನಡ ವಿಷಯಗಳೆರಡರಲ್ಲಿ ಎಂಎ, ಬಿಇಡಿ ಪಡೆದಿರುವ ಇವರು೨೦೧೫ರಿಂದ ಎಸ್.ಇ.ಎಸ್. ಬಾಲಕಿಯರ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ವಿಜ್ಞಾನದ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಇವರು ತಾಲ್ಲೂಕು ಮಾತ್ರವಲ್ಲದೆ, ರಾಜ್ಯದ ವಿವಿಧೆಡೆ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ವಿಶೇಷತೆ: ಸಮಾಜ ವಿಜ್ಞಾನ ಶಿಕ್ಷಕರಾಗಿರುವ ಇವರು ತಮ್ಮ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಪ್ರತಿ ಪಾಠವನ್ನು ಡಿಜಿಟಲ್ ಮಾಧ್ಯಮದ ಮೂಲಕ ಬೋಧಿಸುತ್ತಿದ್ದಾರೆ. ತಾವೇ ಸ್ವತಃ ಪ್ರತಿ ಪಾಠಗಳ ಪಿಪಿಟಿ ತಯಾರಿಸಿ, ಡಿಜಿಟಲ್ ಬೋರ್ಡ್ ಮೂಲಕ ಬೋಧಿಸುತ್ತಾರೆ.
ತಮ್ಮ ಶಾಲೆಯಲ್ಲಿ ಸಮಾಜ ವಿಜ್ಞಾನದ ಲ್ಯಾಬ್ ಆರಂಭಿಸಿರುವ ಇವರು ಅಲ್ಲಿ ಇತಿಹಾಸ ಉಗಮದಿಂದ ಇಲ್ಲಿಯವರೆಗಿನ ಘಟನೆ ಬಿಂಬಿಸುವ ಚಿತ್ರಪಟ ಸಂಗ್ರಹಿಸಿ, ವಿದ್ಯಾರ್ಥಿಗಳಿಗೆ ಅವುಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ.ಪುಸ್ತಕ ರಚನೆ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಅನುಕೂಲವಾಗಲೆಂದು ಕನ್ನಡ ವ್ಯಾಕರಣ ಪುಸ್ತಕವನ್ನು ರಚಿಸಿದ್ದಾರೆ. ಪ್ರಾಚೀನ, ಮಧ್ಯಯುಗೀನ, ಆಧುನಿಕ ಭಾರತದ ಇತಿಹಾಸ ಮತ್ತು ಕರ್ನಾಟದಕ ಇತಿಹಾಸದ ಕುರಿತ ನೋಟ್ಸ್ ರಚಿಸಿಕೊಂಡಿದ್ದಾರೆ. ಆದರೆ, ಅವುಗಳನ್ನು ಮುದ್ರಿಸಿಲ್ಲ.
ಪ್ರತಿ ಪಾಠದ ನಂತರ ಪಿಪಿಟಿ ಮೂಲಕ ರಸಪ್ರಶ್ನೆ ಕಾರ್ಯಕ್ರಮ ನಡೆಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಖಾತ್ರಿ ಪಡಿಸುವ ಕಾರ್ಯ ಮಾಡುತ್ತಿದ್ದಾರೆ. ರಾಮಚಂದ್ರ ಕರೂರ್ ಅವರ ನೇತೃತ್ವದಲ್ಲಿ ಕಲ್ಲಯ್ಯ ಸಿದ್ದಯ್ಯ ಮಠ್ ಅವರನ್ನು ಒಳಗೊಂಡಂತೆ ೨೫ ಜನರನ್ನು ಒಳಗೊಂಡ ತಂಡ ಎಸ್‌ಎಸ್‌ಎಸ್‌ಟಿಎಫ್ ಡಿಜಿಟಲ್ ಗ್ರೂಪ್ ಎಂಬ ಬ್ಲಾಗ್ ರಚಿಸಿಕೊಂಡಿದ್ದು, ಅದರ ಮೂಲಕ ಪಾಠಗಳ ನೋಟ್ಸ್, ಪ್ರಶ್ನೆಪತ್ರಿಕೆ, ರಸಪ್ರಶ್ನೆ ಮುಂತಾದ ಅಂಶಗಳನ್ನು ಬಿತ್ತರಿಸುತ್ತಿದ್ದಾರೆ. ಈ ಬ್ಲಾಗನ್ನು ಇಲ್ಲಿಯವರೆಗೆ ೬ ಕೋಟಿ ಜನರು ವೀಕ್ಷಿಸಿದ್ದಾರೆ ಎನ್ನುತ್ತಾರೆ ಕಲ್ಲಯ್ಯ ಸಿದ್ದಯ್ಯ ಮಠ್.ಇವರ ಮಾರ್ಗದರ್ಶನಲ್ಲಿ ಇವರ ವಿದ್ಯಾರ್ಥಿಗಳು ಕಲೆ ಮತ್ತು ವಾಸ್ತುಶಿಲ್ಪ ಕುರಿತಾದ ಪ್ರಾಚ್ಯಪ್ರಜ್ಞೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಾಲ್ಕು ವರ್ಷಗಳಿಂದ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದಾರೆ. ಒಬ್ಬ ವಿದ್ಯಾರ್ಥಿನಿ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ೨೦೨೨ರಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
ನವೀನ ತಂತ್ರಜ್ಞಾನ ಉಪಯೋಗಿಸಿಕೊಂಡು ತಮ್ಮ ಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೆ, ರಾಜ್ಯಾದ್ಯಂತ ಇರುವ ವಿದ್ಯಾರ್ಥಿಗಳನ್ನೂ ತಮ್ಮ ಬ್ಲಾಗ್ ಮಾಧ್ಯಮದ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ನೆರವು ನೀಡುತ್ತಿದ್ದಾರೆ. ಇವರ ಕಾರ್ಯ ಶ್ಲಾಘನೀಯವಾಗಿದ್ದು, ಇವರು ಮಾದರಿ ಶಿಕ್ಷಕರಾಗಿದ್ದಾರೆ.