ನವೋದಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ

| Published : Apr 01 2024, 12:51 AM IST

ಸಾರಾಂಶ

ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು ಕ್ಯಾಂಪಸ್‌ನ ವಿದ್ಯಾರ್ಥಿ ವಸತಿ ನಿಲಯದ 4ರಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಜಗಳದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು.

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ನವೋದಯ ವೈದ್ಯಕೀಯ ಶಿಕ್ಷಣ ಸಂಸ್ಥೆ (ಎನ್ಇಟಿ)ಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮಾರಾಮಾರಿ ಹೊಡೆದಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.

ತೆಲಂಗಾಣದ ನಾರಾಯಣಪೇಟ್ ಮಾಜಿ ಶಾಸಕ ಎಸ್‌.ಆರ್‌.ರೆಡ್ಡಿ ಅವರ ನೇತೃತ್ವದ ಎನ್‌ಇಟಿ ಸಂಚಾಲಿತ ನವೋದಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ವಸತಿ ನಿಲಯ-5 ರಲ್ಲಿ ಎರಡೂ ಗುಂಪುಗಳ ನಡುವೆ ಜಗಳವಾಗಿದ್ದು, ಈ ವೇಳೆ ವಿದ್ಯಾರ್ಥಿಗಳು ಕೈಯಲ್ಲಿ ಬೆತ್ತ, ಬಡಿಗೆ, ದೊಣ್ಣೆ ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದು ಘಟನೆಯಲ್ಲಿ ಒಬ್ಬ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿವೆ. ಎನ್‌ಇಟಿ ಕ್ಯಾಂಪಸ್‌ನಲ್ಲಿ ಕಳೆದ ಮೂರು ದಿನಗಳಿಂದ ರಿಗೇಲ್‌-24 ಆಯೋಜಿಸಿದ್ದು, ವಿವಿಧ ಪದವಿಗಳ ಪ್ರದಾನ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ರಿಗೇಲ್‌ ಕೊನೆ ದಿನವಾದ ಶನಿವಾರ ರಾತ್ರಿ ಪಾರ್ಟಿ ಪೂರ್ಣಗೊಳಿಸಿಕೊಂಡು ವಸತಿ ನಿಲಯಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಬಡೆದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಒಬ್ಬ ವಿದ್ಯಾರ್ಥಿ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ನಡಿವಿನ ಗುಂಪು ಘರ್ಷಣೆಯು ಇಡೀ ಕ್ಯಾಂಪಸ್‌ನಲ್ಲಿ ಆತಂಕ ಸೃಷ್ಠಿಸಿದೆ. ನೇತಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ರೀತಿಯ ದೂರು ಠಾಣೆಯಲ್ಲಿ ದಾಖಲಾಗಿಲ್ಲ.