ಕೊಳಚೆ ನೀರಲ್ಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು

| Published : Oct 23 2024, 12:34 AM IST

ಸಾರಾಂಶ

‘ವೈ.ಎನ್‌.ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಬಳಿ ಕೊಳಚೆ ನೀರು ಸಂಗ್ರಹದ ಬಗ್ಗೆ ಮಾಹಿತಿ ಇದ್ದು, ಸೂಕ್ತ ರಸ್ತೆ ಇಲ್ಲದ ಕಾರಣ ವಿದ್ಯಾರ್ಥಿಗಳು ಕೆಸರುಗದ್ದೆಯಲ್ಲಿ ಒಡಾಡುತ್ತಿದ್ದಾರೆ. ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮವಹಿಸುತ್ತೇವೆ.’

ಕನ್ನಡಪ್ರಭ ವಾರ್ತೆ ವೈ.ಎನ್‌. ಹೊಸಕೋಟೆ

ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಿಸುವಲ್ಲಿ ಗ್ರಾಮ ಪಂಚಾಯತ್‌ ವಿಫಲವಾಗಿದ್ದು, ಊರಿನ ಮನೆಗಳ ಕೊಳಚೆ ನೀರು ಊರಾಚೆಯಿರುವ ಸರ್ಕಾರಿ ಪ್ರೌಢಶಾಲೆ ಅವರಣದ ಹೊರಭಾಗದಲ್ಲಿ ಬೃಹದಾಕಾರವಾಗಿ ಶೇಖರಣೆಯಾಗಿದೆ. ಕಳೆದ 2- 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶಾಲೆಗೆ ಹೋಗಲು ಇದ್ದ ಮಣ್ಣಿನ ರಸ್ತೆ ಕೊಳಚೆ ನೀರಿನಿಂದ ಕೆಸರುಗದ್ದೆಯಾಗಿದೆ. ಇದರಿಂದ ಶಾಲೆಗೆ ಹೋಗಲು ಸೂಕ್ತ ದಾರಿಯಿಲ್ಲದೇ ವಿದ್ಯಾರ್ಥಿಗಳು ಅದೇ ರಸ್ತೆಯಲ್ಲೇ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.

ಶಾಲೆ ಆರಂಭವಾಗಿ 10 ರಿಂದ 12 ವರ್ಷವಾದರೂ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದಂತಾಗಿದೆ. ಪಾವಗಡ ತಾಲೂಕು ಗಡಿಭಾಗದಲ್ಲಿರುವ ವೈ.ಎನ್‌.ಹೊಸಕೋಟೆ ಹೋಬಳಿ ಕೇಂದ್ರವಾಗಿದ್ದು, ಇಲ್ಲಿಗೆ ಸುತ್ತಮುತ್ತ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ಬರುತ್ತಾರೆ. ಈ ಶಾಲೆ ದೊಡ್ಡಹಳ್ಳಿ ಮಾರ್ಗದ ಮುಖ್ಯರಸ್ತೆಯಿಂದ ಸುಮಾರ 100 ಮೀಟರ್‌ ಒಳಕ್ಕಿದೆ. ಈ ಶಾಲೆಯಲ್ಲಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕೊಳಚೆ ನೀರು ಸಂಗ್ರಹ:

ಮಳೆ ಬಂದರೆ ಸಾಕು ಊರಿನ ಕೊಳಚೆ ನೀರೆಲ್ಲಾ ಹರಿದು ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡು ಗೋಡೆ ಹೊರಗೆ ಶೇಖರಣೆಯಾಗುತ್ತಿದ್ದು, ಶಾಲೆ ಹಾಗೂ ಮನೆಗೆ ಹೋಗಿ ಬರುವ ವೇಳೆ ಕೆಸರುಗದ್ದೆಯಂತಿರುವ ಕೊಳಚೆ ನೀರಿನ ರಸ್ತೆ ಮಾರ್ಗದಲ್ಲಿ ವಿದ್ಯಾರ್ಥಿಗಳು ನಿತ್ಯ ಒಡಾಡುವ ಅನಿವಾರ್ಯತೆ ಎದುರಾಗಿದೆ.

ಸೊಳ್ಳೆ ಹಾಗೂ ಕ್ರಿಮಿಕೀಟಗಳ ಹಾವಳಿಯಿಂದ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವ ಭೀತಿ:

ರೋಗಗಳ ತಡೆಗೆ ಹೆಚ್ಚು ಜಾಗೃತಿ ಮೂಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಹಿರಿಯ ಅಧಿಕಾರಿಗಳು ಗ್ರಾಪಂ ಪಿಡಿಒಗಳಿಗೆ ಆದೇಶಿಸಿದ್ದರೂ ಚರಂಡಿ ನಿರ್ಮಾಣ ಹಾಗೂ ಕೊಳಚೆ ನೀರು ಸಂಗ್ರಹ ತೆರವುಗೊಳಿಸುವಲ್ಲಿ ಗ್ರಾಪಂ ಪಿಡಿಒ ನಿರ್ಲಕ್ಷ್ಯವಹಿಸಿದ್ದಾರೆ. ಇದರ ಪರಿಣಾಮವಾಗಿ ಸೊಳ್ಳೆ ಹಾಗೂ ಇತರೆ ಕ್ರಿಮಿಕೀಟಗಳ ಹಾವಳಿಯಿಂದ ಶಾಲಾ ವಿದ್ಯಾರ್ಥಿಗಳು ತತ್ತರಿಸಿದ್ದಾರೆ. ಸೊಳ್ಳೆಗಳ ಹಾವಳಿ ಮತ್ತು ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಎದುರಾಗಿದೆ.

ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ:

ಗಿಡ- ಗಂಟೆ ಹಾಗೂ ಮುಳ್ಳಿನ ಗಿಡಗಳಿರುವ ಕಾರಣ ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ಶಾಲೆಗೆ ರಸ್ತೆ ನಿರ್ಮಿಸಿಕೊಡಿ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶಾಲಾ ಕೊಠಡಿಯ ನವೀಕರಣ ಹಾಗೂ ದುರಸ್ತಿ ಬಗ್ಗೆ ಆಸಕ್ತಿವಹಿಸಿ ಹಾಗೂ ಒಡಾಡಲು ಮುಖ್ಯರಸ್ತೆಯಿಂದ ಸರ್ಕಾರಿ ಪ್ರೌಢಶಾಲೆಯವರೆಗೆ ಸೂಕ್ತ ರಸ್ತೆ ನಿರ್ಮಿಸಿ ಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಮುಖಂಡರಾದ ಮಾರಪ್ಪ, ಹನುಮಂತಪ್ಪ, ನಾರಾಯಣಪ್ಪ, ಪರಮೇಶಪ್ಪ ಹಾಗೂ ವೆಂಕಟೇಶ್‌ ಸೇರಿದಂತೆ ಇತರೆ ಸ್ಥಳೀಯ ಮುಖಂಡರು ದೂರಿದ್ದಾರೆ.‘ವೈ.ಎನ್‌.ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಬಳಿ ಕೊಳಚೆ ನೀರು ಸಂಗ್ರಹದ ಬಗ್ಗೆ ಮಾಹಿತಿ ಇದ್ದು, ಸೂಕ್ತ ರಸ್ತೆ ಇಲ್ಲದ ಕಾರಣ ವಿದ್ಯಾರ್ಥಿಗಳು ಕೆಸರುಗದ್ದೆಯಲ್ಲಿ ಒಡಾಡುತ್ತಿದ್ದಾರೆ. ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮವಹಿಸುತ್ತೇವೆ.’

ಇಂದ್ರಾಣಮ್ಮ, ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ

---

‘ನಮ್ಮ ಸರ್ಕಾರಿ ಪ್ರೌಢಶಾಲೆಯಲ್ಲಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯ ರಸ್ತೆಯಿಂದ ಶಾಲೆಗೆ ಹೋಗಿಬರಲು ಸೂಕ್ತ ರಸ್ತೆ ವ್ಯವಸ್ಥೆಯಿಲ್ಲ. ಶಾಲಾ ಅವರಣ ಹೊರವಲಯದ ಜಮೀನಿನ ಬಗ್ಗೆ ಮಾಲೀಕರಲ್ಲಿ ವಿವಾದವಿರುವ ಕಾರಣ ಶಾಲೆಗೆ ಹೋಗಿಬರಲು ಸೂಕ್ತ ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಶಾಲೆಗೆ ಸೂಕ್ತ ರಸ್ತೆ ಕಲ್ಪಿಸಿಕೊಡಲು ಅಸಕ್ತಿವಹಿಸಿದ್ದರೂ ಜಮೀನಿನ ವಿವಾದದ ಕಾರಣಕ್ಕೆ ಈ ಪರಿಸ್ಥಿತಿ ಬಂದಿದೆ. ಶಾಲೆಯ ಬಳಿ ಶೇಖರಣೆಯಾದ ಕೊಳಚೆ ನೀರಿನಲ್ಲಿ ವಿದ್ಯಾರ್ಥಿಗಳು ಒಡಾಡುವ ಸ್ಥಿತಿ ಎದುರಾಗಿದೆ.’

ಹನುಮಂತರಾಯಪ್ಪ, ಮುಖ್ಯ ಶಿಕ್ಷಕ