ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ವಿವಿಧತೆಯಲ್ಲಿ ಏಕತೆ ಕಂಡಿರುವ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ತಾಲೂಕಿನ ಬಿದರಕುಂದಿ ಗ್ರಾಮದ ವ್ಯಾಪ್ತಿಯ ಆದರ್ಶ ವಿದ್ಯಾಲಯದ ಹತ್ತಿರ ದಿ. ದೇವರಾಜುಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ದೇಶದ ಆಸ್ತಿ, ಸದೃಢ ಭಾರತವನ್ನು ಕಟ್ಟುವ ಶಕ್ತಿ ಅವರ ಕೈಯಲ್ಲಿದೆ. ಈ ಹಿನ್ನೆಲೆಯಲ್ಲಿ ವ್ಯರ್ಥ ಸಮಯ ಹಾಳುಮಾಡಿಕೊಳ್ಳದೇ ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವಾರು ಜನ ಸ್ವಾತಂತ್ರ್ಯ ಹೋರಾಟಗಾರರ, ಶರಣರ, ಸಾಧಕರ ಆದರ್ಶ ಜೀವನವನ್ನು ತಮ್ಮ ವಿದ್ಯಾರ್ಥಿ ಜೀವನ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇ ಭವಿಷ್ಯ ಉತ್ತಮ ನಾಯಕರಾಗಿ ಎಲ್ಲರೂ ಮೆಚ್ಚುವ ಹಾಗೆ ಬೆಳೆದು ನಿಲ್ಲಬೇಕು. ಸದ್ಯ ಈ ವಸತಿ ನಿಲಯದ ಕಟ್ಟಡವೂ ತಮ್ಮ ಮನೆಯಂದು ಭಾವಿಸಿ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಇಂದಿನ ಆಧುನಿಕ ತಂತ್ರಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪರ್ಧಾ ಮನೋಭಾವ ಬೆಳಸಿಕೊಂಡು ಅಭ್ಯಾಸದ ಕಡೆ ಗಮನ ಹರಿಸುವ ಮೂಲಕ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿ ಜೀವನ ನಿಮ್ಮದಾಗಬೇಕು ಎಂದು ಹಾರೈಸಿದರು.ಕಳೆದ 2016-17ರಲ್ಲಿ ದಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಸ್ಥಾಪಿಸಲು ತೀರ್ಮಾನಿಸಿ ಪ್ರಸ್ತುತ ಈ ವಸತಿ ನಿಲಯಕ್ಕೆ ಅಂದಿನ ನಮ್ಮ ಸರ್ಕಾರ ಮಂಜೂರಾತಿ ನೀಡಿತ್ತು. ಮುಂದೆ 2021ರಲ್ಲಿ ಇದಕ್ಕೆ ಕಟ್ಟಡ ಪ್ರಾರಂಭಿಸಲಾಯಿತು. ಸದ್ಯ ಕಟ್ಟಡವೂ ಸಂಪೂರ್ಣ ಮುಕ್ತಾಯಗೊಂಡಿದ್ದು, ಅಲ್ಪಸ್ವಲ್ಪ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಬಾಕಿ ಕೆಲಸವಿದೆ. ಆದರೆ, ಗುತ್ತಿಗೆದಾರರಿಗೆ ಬಾಕಿ ಹಣ ಮಂಜೂರ ಮಾಡಿಲ್ಲವೆಂದು ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರ ಮಾಡಿರಲಿಲ್ಲ ಎಂಬ ವಿಷಯ ತಿಳಿದು ತಕ್ಷಣದಲ್ಲಿಯೇ ಕ್ರೈಸ್ತ್ ಸಂಸ್ಥೆಯ ಮುಖ್ಯಸ್ಥರಿಗೆ ದೂರವಾಣಿ ಮೂಲಕ ಮಾತನಾಡಿ ಈ ಹಿಂದಿನ ಸರ್ಕಾರದ ನ್ಯೂನ್ಯತೆಗಳ ಬಗ್ಗೆ ನಾನು ಮಾತನಾಡಲಾರೆ. ಆಗ ಏನಾಗಿದೇಯೋ ನನಗೆ ಗೊತ್ತಿಲ್ಲ. ಪ್ರಸ್ತುತ ನಮ್ಮ ಸರ್ಕಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನಿಸುತ್ತೇನೆ. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಟ್ಟಡವನ್ನು ಇಲಾಖೆಗೆ ಹಸ್ತಾಂತರ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದ್ದೆ. ಅದರಂತೆ ಇಂದು ಗುತ್ತಿಗೆದಾರರು ಬಿಸಿಎಂ ಇಲಾಖೆಗೆ ಹಸ್ತಾಂತರ ಮಾಡುವ ಮೂಲಕ ಉದ್ಘಾಟನೆಗೊಳ್ಳುತ್ತಿದೆ ಎಂದು ತಿಳಿಸಿದರು.ಬಸವ ನಗರದಲ್ಲಿನ ಖಾಸಗಿ ಮಾಲೀಕತ್ವದ ವಸತಿ ನಿಲಯದ ಹಳೆ ಕಟ್ಟಡವೂ ಸಂಪೂರ್ಣ ಬಿರುಕಗೊಂಡು ಯಾವಾಗ ಬೀಳುತ್ತದೆಯೋ ಏನು ಎನ್ನುವ ಅಪಾಯದ ಸ್ಥಿತಿಯಲ್ಲಿದ್ದಿದ್ದು ಮಾತ್ರವಲ್ಲದೇ ವಿದ್ಯಾರ್ಥಿಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೀವೃ ಸಂಕಷ್ಟ ಅನುಭವಿಸುತ್ತಿರುವುದನ್ನು ಸ್ವತಃ ಪರೀಶಿಲನೆ ವೇಳೆ ಗೊತ್ತಾಗಿ ಹಳೆ ಕಟ್ಟಡದಲ್ಲಿರುವ ಸುಮಾರು 120 ಜನ ಪುರುಷ ವಿದ್ಯಾರ್ಥಿಗಳು ದಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಅನುಕೂಲ ಮಾಡಿಕೊಡಲಾಗಿದೆ ಎಂದು ವಿವರಿಸಿದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಇಲಾಖೆಯ ಶಿವಲೀಲಾ ಕೊಣ್ಣೂರ, ವಿಸ್ತಿರ್ಣಾಧಿಕಾರಿ ಉಮೇಶ ಮಾಟೂರ, ನಿಲಯ ಪಾಲಕ ಈರಭದ್ರಪ್ಪ ಮೋರ್ಕೆ, ಗಣ್ಯರಾದ ವೈ.ಎಚ್.ವಿಜಯಕರ, ಪುರಸಭೆ ಸದಸ್ಯರಾದ ಮೈಬೂಬ್ ಗೊಳಸಂಗಿ, ರೀಜಾಹಮ್ಮದ ಢವಳಗಿ, ಶಿವು ಶಿವಪುರಿ, ಯಲ್ಲಪ್ಪ ನಾಯಕಮಕ್ಕಳ, ಗೋಪಿ ಮಡಿವಾಳ ಸೇರಿದಂತೆ ಹಲವರು ಇದ್ದರು.
ಸದ್ಯ ನಮ್ಮ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಸದ್ಯ ಒಬ್ಬ ವಿದ್ಯಾರ್ಥಿಗೆ ಊಟಕ್ಕೆ ₹68 ಗಳನ್ನು ಮಾತ್ರ ಖರ್ಚು ಮಾಡಬೇಕೆನ್ನುವ ಆದೇಶವನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಇಂದಿನ ಬೆಲೆ ಏರಿಕೆ ತಕ್ಕಂತೆ ಊಟಕ್ಕೆಂದು ನೀಡುವ ಹಣವನ್ನು ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಜತೆಗೆ ನಾಲ್ಕೈದು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ಮಂಜೂರ ಮಾಡಿಸಿಕೊಂಡು ಬರುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು.-ಸಿ.ಎಸ್.ನಾಡಗೌಡ(ಅಪ್ಪಾಜಿ),
ಶಾಸಕರು.ಕಳೆದ ಒಂದು ವಾರದ ಹಿಂದೆ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ನಮ್ಮ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯದ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವು. ಒಂದೇ ವಾರದಲ್ಲಿ ನಮ್ಮ ಸಮಸ್ಯೆ ಬಗೆ ಹಿರಿಸುವುದಾಗಿ ಭರವಸೆ ಕೊಟ್ಟಿದ್ದರು. ತಾವು ಭರವಸೆ ಕೊಟ್ಟಂತೆ ಒಂದೇ ವಾರದಲ್ಲಿ ನಮ್ಮ ನೂತನ ವಸತಿ ನಿಲಯದ ಕಟ್ಟಡ ಉದ್ಘಾಟಿಸಿ ಸುಮಾರು 120 ಜನ ವಿದ್ಯಾರ್ಥಿಗಳನ್ನು ಹೊಸ ವಸತಿ ನಿಲಯಕ್ಕೆ ಸ್ಥಳಾಂತರ ಮಾಡಿ ನುಡಿದಂತೆ ನಡೆದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳನ್ನು ಸಮರ್ಪಿಸುತ್ತೇವೆ.-ಮಹೇಶ ದೊಡಮನಿ, ಗ್ಯಾನಪ್ಪ ಮಲಗಲದಿನ್ನಿ, ವಿರೇಶ ಪತ್ತಾರ, ಗುರುನಾಥತಂಗಡಗಿ, ಬಸವರಾಜ ಮೇಟಿ.