ಸಾಮಾಜಿಕ ಕಳಕಳಿ, ಜವಾಬ್ದಾರಿ ಅರಿಯಿರಿ: ತಹಸೀಲ್ದಾರ್ ಶ್ವೇತಾ

| Published : May 17 2024, 01:39 AM IST

ಸಾಮಾಜಿಕ ಕಳಕಳಿ, ಜವಾಬ್ದಾರಿ ಅರಿಯಿರಿ: ತಹಸೀಲ್ದಾರ್ ಶ್ವೇತಾ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿಯರು ವೃತ್ತಿ ಜೀವನದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು ಎಂದು ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಕರೆ ನೀಡಿದರು. ಹಾಸನದಲ್ಲಿ ವುಮನ್ಸ್ ಕಾಲೇಜ್ ನ್ಯೂಸ್ ಪತ್ರಿಕೆ ಬಿಡುಗಡೆ ಮತ್ತು ಪ್ರಾಯೋಗಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವುಮನ್ಸ್ ಕಾಲೇಜ್ ನ್ಯೂಸ್ ಪತ್ರಿಕೆ ಬಿಡುಗಡೆ । ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿನಿಯರು ವೃತ್ತಿ ಜೀವನದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು ಎಂದು ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಕರೆ ನೀಡಿದರು.

ನಗರದ ಎಂ.ಜಿ.ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ನಡೆದ ವುಮನ್ಸ್ ಕಾಲೇಜ್ ನ್ಯೂಸ್ ಪತ್ರಿಕೆ ಬಿಡುಗಡೆ ಮತ್ತು ಪ್ರಾಯೋಗಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಪತ್ರಿಕೋದ್ಯಮಕ್ಕೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು, ಆತ್ಮಸಾಕ್ಷಿ ಹಾಗೂ ನೈಜತೆಯನ್ನು ಇಟ್ಟುಕೊಂಡು ಸಮಾಜಕ್ಕೆ ಸುದ್ದಿಯನ್ನು ನೀಡುವಂತಹ ಪತ್ರಕರ್ತರಾಗಬೇಕು. ವೃತ್ತಿ ಜೀವನದಲ್ಲಿ ಏನೇ ಒತ್ತಡಗಳು ಬಂದರೂ ಸಹ ಅದಕ್ಕೆ ಅಂಜದೆ ಜವಾಬ್ದಾರಿಯನ್ನು ಅರಿತು ಕೆಲಸವನ್ನು ನಿರ್ವಹಿಸಬೇಕು. ವಿದ್ಯಾರ್ಥಿನಿಯರು ಪುಸ್ತಕ ಓದುವ ಹವ್ಯಾಸ ಮತ್ತು ಛಲವನ್ನು ಬೆಳೆಸಿಕೊಂಡು ಉತ್ತಮವಾದ ಭವಿಷ್ಯವನ್ನು ರೂಪಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪತ್ರಿಕೋದ್ಯಮವು ವಿಶಾಲವಾಗಿ ಬೆಳೆದಿದ್ದು, ವಿದ್ಯುನ್ಮಾನ ಮಾಧ್ಯಮಕ್ಕೆ ಹೋಲಿಸಿದರೆ ಜನರು ಮುದ್ರಣ ಮಾಧ್ಯಮದ ಮೇಲೆ ಹೆಚ್ಚಿನ ವಿಶ್ವಾಸವನ್ನು ಇಟ್ಟಿದ್ದಾರೆ. ಮುಂದೆ ವೃತ್ತಿ ಜೀವನದಲ್ಲಿ ವಿದ್ಯಾರ್ಥಿನಿಯರು ಕನಿಷ್ಠ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತ ಮಾತನಾಡಿ, ವಿದ್ಯಾರ್ಥಿನಿಯರು ಪದವಿ ಮುಗಿದ ನಂತರ ವಿವಾಹವಾದರೂ ನಂತರ ಸಾಧನೆಯನ್ನು ಮಾಡಿ ತೋರಿಸಬೇಕು. ಗುರು, ಹಿರಿಯರಿಗೆ ಗೌರವನ್ನು ನೀಡುವಂತಹ ಸಂಸ್ಕಾರವನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಸಿ.ಎಸ್.ಮಂಜುಳ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಪಿ.ರವಿಕುಮಾರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಆರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಚ್.ಪಿ.ಪೂರ್ಣಿಮ, ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾಯೋಗಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು.