ಸಾರಾಂಶ
ನ್ಯಾಯಾಧೀಶೆ ಎಚ್.ಆರ್.ಹೇಮ ಸಲಹೆ
ಕನ್ನಡಪ್ರಭ ವಾರ್ತೆ ಚಳ್ಳಕೆರೆದೇಶದ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇಯಾದ ಸ್ವಾತಂತ್ರ್ಯವನ್ನು ಹೊಂದಿದ್ಧಾನೆ. ತಾನು ಯಾವ ರೀತಿಯಲ್ಲಿ ಬೇಕಾದರೂ ಬದುಕು ರೂಪಿಸಿಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ ಎಂದು ನ್ಯಾಯಾಧೀಶೆ ಎಚ್.ಆರ್.ಹೇಮ ತಿಳಿಸಿದರು.ಹೆಗ್ಗರೆತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಾಲೇಜು ಅಭ್ಯಾಸಕ್ಕೆ ಕಾಲಿಡುತ್ತಿದ್ದು, ಅವರಿಗೆ ನಮ್ಮ ದೇಶದ ಕಾನೂನಿನ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ.ಬಿ.ನಂದ್ಯಾಲ್ ಮಾತನಾಡಿ, ಕಾನೂನು ಹೆಚ್ಚು ಬಳಕೆಯಿಂದ ಶಾಂತಿ ನೆಲೆಸುತ್ತದೆ ಎಂಬುವುದರಲ್ಲಿ ಅನುಮಾನವೆ ಇಲ್ಲ. ಯಾವುದೇ ರೀತಿಯ ತೊಡಕು ಉಂಟಾದರೂ ಅದನ್ನು ನಿವಾರಿಸುವ ಶಕ್ತಿ ಕಾನೂನಿಗೆ ಮಾತ್ರ ಇದೆ. ಪ್ರೀತಿ, ವಿಶ್ವಾಸ ಪರಸ್ವರ ಗೌರವದಿಂದಲೂ ಸಹ ನಾವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದಕ್ಕೆ ಬೇಕಾದ ಎಲ್ಲಾ ಪೂರಕ ಅಂಶಗಳು ಕಾನೂನಿನಲ್ಲಿವೆ. ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಮೂಲಕ ನಾವೆಲ್ಲರೂ ಕಾನೂನು ಪರಿಪಾಲನೆ ಮೂಲಕ ಸಮಾಜದಲ್ಲಿ ಶಾಂತಿ ಭದ್ರವಾಗಿ ನೆಲೆಯೂರಲು ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲರಲ್ಲೂ ಕಾನೂನು ಪರಿಪಾಲನೆ ಬಗ್ಗೆ ಜಾಗೃತಿಮೂಡಿಸಲಾಗುತ್ತಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇಯಾದ ಸುಂದರ ಬದುಕು ರೂಪಿಸಿಕೊಳ್ಳಲು ನಮ್ಮ ಸಂವಿಧಾನ ಮತ್ತು ಕಾನೂನು ನಮಗೆ ಆಸರೆಯಾಗಿದೆ ಎಂದರು.
ಮುಖ್ಯ ಶಿಕ್ಷಕ ಈರಣ್ಣ, ಬಿ.ರಾಜಕುಮಾರ್, ಹಿರೇಮಠ, ಪ್ರಾಣೇಶ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಪಾಲಯ್ಯ, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ರುದ್ರಯ್ಯ ಉಪಸ್ಥಿತರಿದ್ದರು. ಪೋಟೋ೨೦ಸಿಎಲ್ಕೆ೨ಚಳ್ಳಕೆರೆ ಹೆಗ್ಗರೆತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ.ಬಿ.ನಂದ್ಯಾಲ್ ಉಪನ್ಯಾಸ ನೀಡಿದರು.